ಚಿತ್ರದುರ್ಗದಲ್ಲಿ ಇಂದು ರೇಣುಕಸ್ವಾಮಿಯವರ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರೇಣುಕಸ್ವಾಮಿಯವರ ಧರ್ಮಪತ್ನಿ 4 ತಿಂಗಳ ಗರ್ಭಿಣಿ. ಮುಂದಿನ ದಿನಗಳಲ್ಲಿ ಆ ಹೆಣ್ಮಗಳಿಗೆ ಒಂದು ಸರಕಾರಿ ಉದ್ಯೋಗ ಕೊಡಬೇಕು; ಸರಕಾರವು ಪರಿಹಾರವನ್ನೂ ಕೊಡಬೇಕು ಎಂದು ಆಗ್ರಹಿಸಿದರು. ರೇಣುಕಸ್ವಾಮಿಯವರ ಹತ್ಯೆ ಒಂದು ಅಮಾನವೀಯ ಕೃತ್ಯ. ನಾಗರಿಕ ಸಮಾಜದ ಯಾರೂ ಕೂಡ ಇದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರು ಈ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸಬೇಕು. ಈ ವಿಚಾರ ಕೇವಲ ರಾಜ್ಯದಲ್ಲಷ್ಟೇ ಅಲ್ಲ; ದೇಶದಲ್ಲೂ ಚರ್ಚೆ ಆಗುತ್ತಿದೆ. ತಂದೆ, ತಾಯಿ, ಅವರ ಧರ್ಮಪತ್ನಿಯನ್ನು ನೋಡಿದರೆ ನಿಜವಾಗಲೂ ಕೂಡ ದುಃಖ ಆಗುತ್ತದೆ ಎಂದು ನುಡಿದರು.
ಈ ಘಟನೆಯಲ್ಲಿ ದೊಡ್ಡ ವ್ಯಕ್ತಿಗಳಿರುವ ವಿಚಾರ ಜಗಜ್ಜಾಹೀರಾಗಿದೆ. ಆದರೆ, ತನಿಖೆ ಸರಿಯಾದ ರೀತಿಯಲ್ಲಿ ಆಗಬೇಕು. ತನಿಖೆ ಸಡಿಲ ಆಗಬಾರದು; ಯಾವುದೇ ಒತ್ತಡಕ್ಕೆ ಮಣಿಯದೆ, ತಪ್ಪಿತಸ್ಥರಿಗೆ, ಕೊಲೆಗಡುಕರಿಗೆ ಸರಿಯಾದ ಶಿಕ್ಷೆ ಆಗುವ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.