ಬಿಜೆಪಿ ಪಾದಯಾತ್ರೆಯ ಫುಲ್ ಡೀಟೈಲ್ ಇಲ್ಲಿದೆ

Krishnaveni K

ಶುಕ್ರವಾರ, 2 ಆಗಸ್ಟ್ 2024 (09:51 IST)
ಬೆಂಗಳೂರು: ಕಾಂಗ್ರೆಸ್ಸಿನ ಸರಕಾರವು ಹಗರಣಗಳ ಸರಕಾರ ಎಂಬುದನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸಲು ಆ.3ರಿಂದ ಆ.10ರವರೆಗೆ ಮೈಸೂರು ಚಲೋ ಪಾದಯಾತ್ರೆಯ ರೂಪುರೇಷೆ ಅಂತಿಮ ಹಂತಕ್ಕೆ ಬಂದಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 140 ಕಿ.ಮೀ.ನ ಪಾದಯಾತ್ರೆ ಇದಾಗಿರುತ್ತದೆ. ಇದರ ತಯಾರಿ ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ಬಂದಿವೆ. ಸಮಾರೋಪವನ್ನೂ ಸೇರಿಸಿಕೊಂಡAತೆ 8 ದಿನಗಳ ಪಾದಯಾತ್ರೆ ಇದಾಗಿರುತ್ತದೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳಿಂದ ಕಾರ್ಯಕರ್ತರು ಈ ಹೋರಾಟಕ್ಕೆ ಬರಬೇಕು ಎಂದ ಅವರು, ರಾಜ್ಯ ಸರಕಾರ ಮಾಡಿದ ಅನ್ಯಾಯಗಳ ಕುರಿತು ಜನರಿಗೆ ತಿಳಿಸುವ ಉದ್ದೇಶ ಇಟ್ಟುಕೊಂಡಿದ್ದು, ಶನಿವಾರ ಬೆಳಿಗ್ಗೆ 9.30ಕ್ಕೆ ಉದ್ಘಾಟನೆ ನೆರವೇರಲಿದೆ. 10ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.

ಪ್ರತಿನಿತ್ಯ 20 ಕಿಮೀ ನಂತೆ 7 ದಿನಗಳ ಕಾಲ 8ರಿಂದ 10 ಸಾವಿರ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉದ್ಘಾಟನೆ, ಸಮಾರೋಪ ಸೇರಿಸಿಕೊಂಡು 7 ದೊಡ್ಡ ಪ್ರತಿಭಟನಾ ಸಭೆಗಳು ನಡೆಯಲಿವೆ. ಬಿಜೆಪಿ- ಜೆಡಿಎಸ್ ಮುಖಂಡರು ಈ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
 
ರಾಜ್ಯದ ಯುವಕರ ತಂಡ, ಪರಿಶಿಷ್ಟ ಜಾತಿ- ಪಂಗಡಗಳ ಎಲ್ಲ ಬಂಧುಗಳು, ಮಹಿಳೆಯರನ್ನು ಕೇಂದ್ರೀಕರಿಸಿಕೊಂಡು ಈ ಪಾದಯಾತ್ರೆಯ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ‘ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ತೊಲಗಿಸಿ’ ಎಂಬ ಘೋಷಣೆಯೊಂದಿಗೆ ಈ ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.

ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಹಗರಣವನ್ನು ಒಪ್ಪಿಕೊಂಡು, ನಂತರ ಅಧಿಕಾರಿಗಳ ಮೇಲೆ ಹಾಕುವ ಪ್ರಯತ್ನ ಮಾಡಿದ್ದಾರೆ. ಸರಕಾರಿ ಹಣವನ್ನು ಖಾಸಗಿ ಖಾತೆಗಳಿಗೆ ವರ್ಗಾಯಿಸಿದ ಉದಾಹರಣೆ ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಹಿಂದದ ಹೆಸರು ಹೇಳಿಕೊಂಡು ದಲಿತರ ಭೂಮಿಯನ್ನು ಸ್ವತಃ ಮುಖ್ಯಮಂತ್ರಿಗಳೇ ಪಡೆದುಕೊಂಡಿರುವುದು ಕೂಡ ಕಾನೂನುಬಾಹಿರ ಎಂಬುದು ಸ್ಪಷ್ಟ ಎಂದರು. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಎಸ್‌ಇಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಕಾನೂನುಬಾಹಿರವಾಗಿ ಬಳಸಿಕೊಂಡದ್ದು ಕೂಡ ಆ ವರ್ಗಕ್ಕೆ ಮಾಡಿದ ದ್ರೋಹ ಎಂದು ಆರೋಪಿಸಿದರು.

ಪಾದಯಾತ್ರೆಯ ಯಶಸ್ಸಿಗೆ 20ರಿಂದ 22 ವಿಭಾಗಗಳನ್ನು ರಚಿಸಲಾಗಿದೆ ಎಂದರಲ್ಲದೆ, ರಾಜ್ಯದ ಎಲ್ಲ ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
 
 
    
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ