ಬೆಂಗಳೂರು: ಮುಡಾ ಹಗರಣದ ವಿರುದ್ಧ ಬಿಜೆಪಿ ನಡೆಸಲಿರುವ ಪಾದ ಯಾತ್ರೆಗೆ ಜೆಡಿಎಸ್ ಅಸಮಾಧಾನ ಹೊರಹಾಕಿತ್ತು. ಇದೀಗ ಪಾದ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದರೆ ನನ್ನ ಈ ಷರತ್ತಿಗೆ ಒಪ್ಪಬೇಕು ಎಂದಿದ್ದಾರೆ. ಆ ಷರತ್ತು ಏನು ಗೊತ್ತಾ?
ಪಾದಯಾತ್ರೆಯಲ್ಲಿ ತಮ್ಮ ಬದ್ಧ ಎದುರಾಳಿ ಪ್ರೀತಂ ಗೌಡ ಭಾಗಿಯಾಗುತ್ತಿರುವುದು ಎಚ್ ಡಿಕೆ ಕೆಂಗಣ್ಣಿಗೆ ಗುರಿಯಾಗಿತ್ತು. ಬಿಜೆಪಿ ಪಾದ ಯಾತ್ರೆಯಲ್ಲಿ ನಾವು ಯಾವುದೇ ಕಾರಣಕ್ಕೂ ಭಾಗಿಯಾಗಲ್ಲ. ದೇವೇಗೌಡರ ಕುಟುಂಬಕ್ಕೆ ಕೆಡುಕು ಮಾಡಿದವರ ಜೊತೆಗೆ ನಾವು ಸೇರಬೇಕಾ ಎಂದು ಸಿಟ್ಟಿಗೆದ್ದಿದ್ದರು.
ಆದರೆ ಇದಾದ ಬಳಿಕ ಕೇಂದ್ರ ಸಚಿವ ಜೆಪಿ ನಡ್ಡಾ, ಪಲ್ಹಾದ್ ಜೋಶಿ ಈ ವಿಚಾರವಾಗಿ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮನಸ್ಸು ಬದಲಾಯಿಸಿರುವ ಕುಮಾರಸ್ವಾಮಿ, ನನ್ನ ಒಂದು ಷರತ್ತಿಗೆ ಒಪ್ಪಿದರೆ ಪಾದ ಯಾತ್ರೆಯಲ್ಲಿಭಾಗಿಯಾಗುವುದಾಗಿ ಹೇಳಿದ್ದಾರೆ.
ಪೆನ್ ಡ್ರೈವ್ ಹಂಚಿ ದೇವೇಗೌಡರ ಕುಟುಂಬ ನಾಶ ಮಾಡಲು ಪ್ರಯತ್ನಿಸಿದ ಪ್ರೀತಂ ಗೌಡ ಪಾದ ಯಾತ್ರೆಯಲ್ಲಿ ಇರಬಾರದು. ಹಾಗಿದ್ದರೆ ಪಾದ ಯಾತ್ರೆಯಲ್ಲಿ ಭಾಗಿಯಾಗುತ್ತೇನೆ ಎಂದು ಕುಮಾರಸ್ವಾಮಿ ಷರತ್ತು ಮುಂದಿಟ್ಟಿದ್ದಾರೆ. ಇದೀಗ ಬಿಜೆಪಿ ನಾಯಕರು ಷರತ್ತಿಗೆ ಒಪ್ಪಿಕೊಳ್ಳುತ್ತಾರಾ ನೋಡಬೇಕು.