ಬಿಜೆಪಿ ನಾಯಕರಿಗೆ ರಾಜೀನಾಮೆ ಕೇಳುವ ನೈತಿಕತೆ ಇದೆಯೇ: ಸಿಎಂ ಸಿದ್ದರಾಮಯ್ಯ

ಮಂಗಳವಾರ, 19 ಜುಲೈ 2016 (13:49 IST)
ಹೈದ್ರಾಬಾದ್‌ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೆಮುಲಾ ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್ ನೋಟ್‌ನಲ್ಲಿ  ಕೇಂದ್ರ ಸಚಿವರಾದ ಬಂಡಾರೂ ದತ್ತಾತ್ರೇಯ್ ಮತ್ತು ಸಚಿವೆ ಸ್ಮೃತಿ ಇರಾನಿ ಹೆಸರುಗಳನ್ನು ದಾಖಲಿಸಿದ್ದರೂ ಮೋದಿ ಸರಕಾರ ಯಾಕೆ ರಾಜೀನಾಮೆ ಪಡೆಯಲಿಲ್ಲ. ಇದೀಗ ಸಚಿವ ಜಾರ್ಜ್ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ನೈತಿಕತೆ ಇದೆಯೇ? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.  
 
ಇಂದು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೊಲೀಸ್ ಅಧಿಕಾರಿಗಳು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಏಕೆಂದರೆ ಅವರ 'ನೇಚರ್ ಆಪ್ ವರ್ಕ್' ಹಾಗೇ ಇರುತ್ತದೆ ಎಂದರು.
 
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆಯಿಲ್ಲ ಎಂದು ಪ್ರತಿಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ 24 ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ನಂತರ ಜಗದೀಶ್ ಶೆಟ್ಟರ್ ಅವರ ಕಾಲಕ್ಕೆ ಅದು ಹಾಗೇ ಮುಂದುವರೆದಿತ್ತು ಎಂದು ತಿರುಗೇಟು ನೀಡಿದರು.
 
ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ರಾಜೀನಾಮೆ ನೀಡುವುದು ಬೇಡ ಎಂದು ಸೂಚಿಸಿದ್ದೆ. ಆದರೆ, ಅವರು ಸರಕಾರ ಹಾಗೂ ಪಕ್ಷಕ್ಕೆ ಮುಜುಗರ ಆಗದಿರಲೆಂದು ಸ್ಪಇಚ್ಚೆಯಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಿಪಕ್ಷಗಳು ನಮ್ಮ ಹೋರಾಟದಿಂದ ರಾಜೀನಾಮೆ ನೀಡಿದರು ಎಂದು ಬೊಬ್ಬೆ ಹೊಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಗಣಿ ಹಗರಣ ಸೇರಿದಂತೆ 13 ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡುವಂತೆ ನಾವು ಒತ್ತಾಯಿಸಿದ್ದೇವು. ಆದರೆ, ಬಿಜೆಪಿ ಒಂದು ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿರುವುದನ್ನು ಬಿಜೆಪಿ ನಾಯಕರು ಮರೆಯಬಾರದು ಎಂದು ಟೀಕಿಸಿದರು.
 
ಕೇಂದ್ರ ಸಚಿವ ಸಂಪುಟದಲ್ಲಿ 13 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್‌ಗಳಿವೆ. ಕೇಂದ್ರ ಸಂಪುಟದ ಗಿರಿರಾಜ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಾಗಿದೆ. ಉಮಾ ಭಾರತಿ ವಿರುದ್ಧ 30 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 2 ಕೊಲೆ ಪ್ರಕರಣಗಳಿವೆ ಅವರ ಬಳಿ ರಾಜೀನಾಮೆ ಕೇಳಿದ್ದೀರಾ ಎಂದು ಪ್ರತಿಪಕ್ಷ ನಾಯಕರನ್ನು ನೇರವಾಗಿ ಪ್ರಶ್ನಿಸಿದ್ದಾರೆ.
 
ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ