ಬೆಂಗಳೂರು: ಜೆಡಿಎಸ್ ಸಂಸದ, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕರ್ಮಕಾಂಡದ ಬಗ್ಗೆ ಮೊದಲೇ ಸುಳಿವು ಸಿಕ್ಕರೂ ಬಿಜೆಪಿ ನಾಯಕರು ನಿರ್ಲ್ಯಕ್ಷಿಸಿದರಾ ಎಂಬ ಅನುಮಾನ ಮೂಡಿದೆ.
ಲೋಕಸಭೆ ಚುನಾವಣೆಗೆ ಟಿಕೆಟ್ ಘೋಷಣೆಗೂ ಮುನ್ನವೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಬಿಜೆಪಿ ನಾಯಕ ದೇವರಾಜೇ ಗೌಡ ಪತ್ರ ಬರೆದು ಪ್ರಜ್ವಲ್ ಕುರಿತಾದ ವಿಡಿಯೋ ಬಗ್ಗೆ ಹೇಳಿದ್ದರು ಎನ್ನಲಾಗಿದೆ. ಹೀಗಿದ್ದರೂ ದೇವರಾಜೇ ಗೌಡ ಸಲಹೆಗೆ ಕಿವಿಗೊಡದೇ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿಗೆ ಮುಂದಾಯಿತು.
ಇದೀಗ ಚುನಾವಣೆ ಸಂದರ್ಭದಲ್ಲೇ ಯಾರೋ ಈ ಪೆನ್ ಡ್ರೈವ್ ನ್ನು ಹೊರಬಿಟ್ಟಿದ್ದಾರೆ. ಇದರಿಂದಾಗಿ ಜೆಡಿಎಸ್ ಜೊತೆಗೆ ಬಿಜೆಪಿ ಕೂಡಾ ಸುಖಾಸುಮ್ಮನೇ ತಲೆತಗ್ಗಿಸುವಂತಾಗಿದೆ. ಇದೀಗ ಬಿಜೆಪಿ ನಾಯಕರ ನಿರ್ಲ್ಯಕ್ಷ ಧೋರಣೆ ಬಗ್ಗೆ ಬಿಜೆಪಿ ಬೆಂಬಲಿಗರಿಂದಲೇ ಆಕ್ರೋಶ ವ್ಯಕ್ತವಾಗಿದೆ.
ಇಂತಹ ಅಶ್ಲೀಲ ವಿಡಿಯೋ ಬಗ್ಗೆ ಮಾಹಿತಿಯಿದ್ದರೂ ರಾಜಕೀಯ ಕಾರಣಕ್ಕೆ ಅಷ್ಟು ಮಹಿಳೆಯರ ಮಾನದ ಬಗ್ಗೆ ಯೋಚಿಸದೇ ಸ್ವಹಿತಾಸಕ್ತಿಯನ್ನೇ ರಾಜ್ಯ ಬಿಜೆಪಿ ನಾಯಕರು ಯೋಚಿಸಿದರಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಕೇಳಿಬಂದಿದೆ. ವಿಪಕ್ಷ ಕಾಂಗ್ರೆಸ್ ಕೂಡಾ ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದು ಇದೇನಾ ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಬಿಜೆಪಿ ಆಂದೋಲನ ಎಂದ ಕುಹುಕವಾಡುತ್ತಿದೆ.