ಬೆಂಗಳೂರು: ರಾಜಕೀಯ ನಿವೃತ್ತಿಯಾಗುತ್ತೇನೆಂದು ಹೇಳಿಕೊಂಡಿದ್ದು ಬಿಜೆಪಿ ಸಂಸದ ಡಿವಿ ಸದಾನಂದ ಗೌಡ ಈಗ ಬೆಂಗಳೂರು ಉತ್ತರ ಕ್ಷೇತ್ರದಿಂದ ಮತ್ತೊಮ್ಮೆ ಟಿಕೆಟ್ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ಬಿಜೆಪಿ ಹೈಕಮಾಂಡ್ ತಕರಾರು ತೆಗೆದಿದೆ.
ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಇದ್ದರೆ ರಾಜಕೀಯ ನಿವೃತ್ತಿಯಾಗುತ್ತೇನೆ, ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿಕೊಂಡು ಬಂದಿದ್ದೇಕೆ ಎಂದು ಬಿಜೆಪಿ ಹೈಕಮಾಂಡ್ ಪ್ರಶ್ನೆ ಮಾಡಿದೆ. ಈ ಮೊದಲು ಡಿವಿ ಸದಾನಂದ ಗೌಡ ನಾನು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹಿಂದೆ ಸರಿಯುವುದಾಗಿ ಹೇಳಿದ್ದರು. ಅವರ ಆ ಹೇಳಿಕೆ ಈಗ ಅವರಿಗೇ ಮುಳುವಾಗಿದೆ.
ಹಿಂದೆ ಆ ರೀತಿ ಹೇಳಿಕೆ ನೀಡಿ ಈಗ ಟಿಕೆಟ್ ಗೆ ಬೇಡಿಕೆಯಿಟ್ಟಿರುವುದು ಯಾಕೆ ಎಂದು ಹೈಕಮಾಂಡ್ ಪ್ರಶ್ನೆ ಮಾಡಿದೆ. ಜೊತೆಗೆ ಡಿವಿ ಸದಾನಂದಗೌಡ ಬದಲು ಆರ್. ಅಶೋಕ್ ಅವರಿಗೇ ಸ್ಪರ್ಧಿಸಬಾರದು ಯಾಕೆ ಎಂದು ಕೇಳಿದೆ ಎನ್ನಲಾಗಿದೆ. ಆದರೆ ಆರ್.ಅಶೋಕ್ ಸದ್ಯಕ್ಕೆ ಶಾಸಕ ಮತ್ತು ವಿಪಕ್ಷ ನಾಯಕರಾಗಿದ್ದಾರೆ. ಅವರು ಲೋಕಸಭೆಗೆ ಸ್ಪರ್ಧಿಸುತ್ತಾರಾ ಗೊತ್ತಿಲ್ಲ.
ಆದರೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಳೆದ ಬಾರಿ ಡಿವಿ ಸದಾನಂದ ಗೌಡ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ ಅವರು ಇದುವರೆಗೆ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಿಲ್ಲ ಎನ್ನುವ ಅಸಮಾಧಾನವೂ ಕ್ಷೇತ್ರದ ಜನರಲ್ಲಿದೆ. ಹೀಗಾಗಿ ಅವರು ಮತ್ತೆ ನಿಂತರೆ ಬಿಜೆಪಿ ಗೆಲ್ಲಬಹುದು ಎಂಬ ನಿರೀಕ್ಷೆಯೂ ಇಲ್ಲ. ಹೀಗಾಗಿ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ಗೂ ಅಷ್ಟು ಒಲವಿಲ್ಲ.