ನಾಲ್ಕು ಗೋಡೆ ಮಧ್ಯೆ ಆಗಿದ್ದನ್ನೆಲ್ಲಾ ಹೇಳಕ್ಕೆ ಆಗಲ್ಲ: ಬಿವೈ ವಿಜಯೇಂದ್ರ

Krishnaveni K

ಶನಿವಾರ, 9 ಮಾರ್ಚ್ 2024 (13:07 IST)
Photo Courtesy: Twitter
ಬೆಂಗಳೂರು: ಮೈಸೂರಿನಿಂದ ಈ ಬಾರಿ ರಾಜವಂಶಸ್ಥ ಯದುವೀರ್ ಒಡೆಯರ್ ಗೆ ಬಿಜೆಪಿಯಿಂದ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಧ‍್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಿಂದ ಈ ಬಾರಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮಾತಕತೆ ನಡೆಸಿದೆ. ಈಗಾಗಲೇ ಹೈಕಮಾಂಡ್ ಗೆ ವರದಿ ನೀಡಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಇದರ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಬಿವೈ ವಿಜಯೇಂದ್ರ ನಾಲ್ಕು ಗೋಡೆ ಮಧ‍್ಯೆ ನಡೆದಿದ್ದನ್ನೆಲ್ಲಾ ಹೇಳಕ್ಕೆ ಆಗಲ್ಲ ಎಂದಿದ್ದಾರೆ.

‘ಗೆಲ್ಲುವಂತಹ 28 ಅಭ್ಯರ್ಥಿಗಳ ಪಟ್ಟಿ ತಯಾರಿಸಿ ಹೈಕಮಾಂಡ್ ಗೆ ಕೊಟ್ಟಿದ್ದೇವೆ. ಯಾವೆಲ್ಲಾ ಅಭ್ಯರ್ಥಿಗಳು ಎಂಬುದನ್ನು ಹೈಕಮಾಂಡ್ ಫೈನಲೈಸ್ ಮಾಡಲಿದೆ. ನಾಲ್ಕು ಗೋಡೆಗಳ ಮಧ‍್ಯೆ ನಡೆದ ಮಾತುಕತೆಗಳನ್ನೆಲ್ಲಾ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಇನ್ನೊಂದೆಡೆ ಈ ಬಾರಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುವ ಸಾಧ‍್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ. ಯದುವೀರ್ ಗೆ ಟಿಕೆಟ್ ನೀಡಿದರೆ ಒಂದೋ ಪ್ರತಾಪ್ ಸಿಂಹಗೆ ಬೇರೆ ಕ್ಷೇತ್ರ ನೀಡಬೇಕಾಗುತ್ತದೆ ಇಲ್ಲವೇ  ಈ ಬಾರಿ ಟಿಕೆಟ್ ಮಿಸ್ ಆಗಲಿದೆ. ಬಿಜೆಪಿ ಹೈಕಮಾಂಡ್ ಈ ಬಾರಿ ಕೆಲವು ಅಚ್ಚರಿಯ ಸಮಾಜದಲ್ಲಿ ಹೆಸರು ಮಾಡಿರುವ ಖ್ಯಾತನಾಮರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡುವ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಯದುವೀರ್ ಬಿಜೆಪಿಯಿಂದ ಸ್ಪರ್ಧಿಸಿದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ