ಬೆಂಗಳೂರು: ರಾಜ್ಯಸಭೆ ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಈಗಾಗಲೇ ಬಿಜೆಪಿಯಿಂದ ಕಾಲು ಹೊರಗಿಟ್ಟಿರುವ ಮಾಜಿ ಸಚಿವ, ಹಾಲಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡಮತದಾನ ಮಾಡಿದ್ದಾರೆ.
ಇತ್ತೀಚೆಗೆ ಪಕ್ಷದ ವಿರುದ್ಧ ಬಹಿರಂಗವಾಗಿ ಕಿಡಿ ಕಾರಿದ್ದ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ನಾಯಕರೊಂದಿಗೆ ಗುರುತಿಸಿಕೊಂಡಿದ್ದರು. ಇದೀಗ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಅಡ್ಡಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿರುವ ಅವರು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತದಾನ ಮಾಡಿದ್ದೇನೆ ಎಂದಿದ್ದಾರೆ.
ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಪರವಾಗಿ ಮತದಾನ ಮಾಡಿರುವುದು ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಆರ್. ಅಶೋಕ್ ಕೊಠಡಿಯಲ್ಲಿ ಸಭೆ ಕೂಡಾ ನಡೆದಿದೆ. ಅಡ್ಡಮತದಾನ ಮಾಡದಂತೆ ಬಿಜೆಪಿ ತನ್ನ ಎಲ್ಲಾ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಹಾಗಿದ್ದರೂ ಕಾಂಗ್ರೆಸ್ ಪರ ಮತ ಚಲಾಯಿಸಿದ ಎಸ್.ಟಿ. ಸೋಮಶೇಖರ್ ವಿರುದ್ಧ ಶಿಸ್ತು ಕ್ರಮ ಸಾಧ್ಯತೆಯಿದೆ. ವಿಪ್ ಉಲ್ಲಂಘನೆ ಮಾಡಿದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಶಾಸಕಾಂಗ ಪಕ್ಷದ ನಾಯಕರು ಇಲ್ಲವೇ ಮುಖ್ಯ ಸಚೇತಕರಿಗೆ ದೂರು ನೀಡುವುದರ ಮೂಲಕ ಶಾಸಕ ಸ್ಥಾನ ಅನರ್ಹಗೊಳ್ಳಬಹುದು.
ಇನ್ನು, ತಮ್ಮ ಪಕ್ಷದ ಪರವಾಗಿ ಮತ ಚಲಾಯಿಸಿದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದ್ದಾರೆ. ಹೀಗಾಗಿ ಸದ್ಯದಲ್ಲೇ ಎಸ್.ಟಿ. ಸೋಮಶೇಖರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದು ಖಚಿತವಾದಂತಾಗಿದೆ.