ಬೆಂಗಳೂರನ್ನು ಟೀಕಿಸುತ್ತಿರುವವರು 25ವರ್ಷಗಳ ಹಿಂದೆ ಎಲ್ಲಿದ್ದರು

Sampriya

ಬುಧವಾರ, 15 ಅಕ್ಟೋಬರ್ 2025 (18:52 IST)
ಬೆಂಗಳೂರು:  ಬೆಂಗಳೂರನ್ನು ಟೀಕಿಸುತ್ತಿರುವ ಉದ್ಯಮಿಗಳು ಈ ಮೂಲಕ ತಮಗೆ ತಾವೇ ನಗರಕ್ಕೆ ಅನ್ಯಾಯ ಮಾಡುತ್ತಿದ್ದಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಟೀಕೆ ಮಾಡಿದರು.

ಸುದ್ದಿಗಾರರು, ಬೆಂಗಳೂರಿನಲ್ಲಿನ ಮೂಲಸೌಕರ್ಯಗಳ ಕೊರತೆ ಬಗ್ಗೆ ಉದ್ಯಮಿ ಕಿರಣ್‌ ಮಜುಂದಾರ್ ಶಾ ಅವರು ಮಾಡಿರುವ ಪೋಸ್ಟ್ ಸಂಬಂಧ ಡಿಕೆ ಶಿವಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಇವರೆಲ್ಲ ತಮ್ಮ ಹೇಳಿಕೆ ಮೂಲಕ ದೇಶ ಮತ್ತು ರಾಜ್ಯಕ್ಕೆ ಧಕ್ಕೆಯನ್ನು ತರುತ್ತಿದ್ದಾರೆ. ಟೀಕೆ ಮಾಡುತ್ತಿರುವವರು  25 ವರ್ಷಗಳ ಹಿಂದೆ ಅವರು ಎಲ್ಲಿದ್ದರು? ಅವರ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆ ಇರುವುದು ಬೆಂಗಳೂರಿನದ್ದು. ಈ ನಗರವು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ, ಉದ್ಯಮಿಗಳನ್ನು ದೊಡ್ಡಮಟ್ಟಕ್ಕೆ ಬೆಳೆಸಿದೆ. ಈಗ ಈ ನಗರವನ್ನು ಟೀಕಿಸುತ್ತಿರುವವರು, ಇಲ್ಲಿನ ಸರ್ಕಾರಗಳು ಎಷ್ಟು ಜಾಗ ನೀಡಿವೆ ಮತ್ತು ಎಷ್ಟು ನೆರವು ನೀಡಿವೆ ಎಂಬುದನ್ನು ನೆನಪಿಸಿಕೊಳ್ಳಬೇಕೆಂದರು.

ರಸ್ತೆ ಗುಂಡಿಗಳನ್ನು ಮುಚ್ಚಲು ಗರಿಷ್ಠ ಪ್ರಮಾಣದಲ್ಲಿಕೆಲಸ ಮಾಡುತ್ತಿದ್ದು, ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಇರಬೇಕು. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಬೆದರಿಸುವುದೇ ನಿಮಗೆ ಮುಖ್ಯವಾದರೆ, ಅದನ್ನೇ ಮಾಡಿ. ನಾನು ಯಾರನ್ನೂ ಪ್ರಶ್ನಿಸುವುದಿಲ್ಲ, ಟೀಕಿಸುವುದಿಲ್ಲ. ಪ್ರಧಾನಿಯೇ ಬೆಂಗಳೂರನ್ನು ಹೊಗಳಿದ್ದಾರೆ. ಆದರೆ ಇವರು ಪ್ರಧಾನಿ ಮಾತಿಗೆ ತದ್ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇವರಿಗೆ ಏನು ಹೇಳುವುದು ಎಂದು ಪ್ರಶ್ನಿಸಿದರು.

ಬೆಂಗಳೂರಿನಿಂದ ಸಾಕಷ್ಟು ಪಡೆದುಕೊಂಡಿರುವ ಕಂಪೆನಿಗಳು ತಮ್ಮ ಸಿಎಸ್‌ಆರ್‌ ನಿಧಿಯನ್ನು ಏನು ಮಾಡುತ್ತಿವೆ? ಎಲ್ಲಿ ವೆಚ್ಚ ಮಾಡುತ್ತಿವೆ? ರಸ್ತೆ ವಿಸ್ತರಣೆಗೆ ಇವರು ತಮ್ಮ ಜಾಗ ಕೊಡುತ್ತಾರಾ? ಯಾರೊಬ್ಬರೂ ನೀಡುವುದಿಲ್ಲ. ಎಲ್ಲದಕ್ಕೂ ತನ್ನದೇ ಆದ ಇತಿಮಿತಿಗಳಿರುತ್ತವೆ. ಅವರು ಎಲ್ಲಿ ಬೆಳೆದಿದ್ದಾರೆ, ಎಲ್ಲಿ ಕೆಲಸ ಮಾಡಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ