ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಹತ್ಯೆ, ಹಲ್ಲೆ ಪ್ರಕರಣಗಳನ್ನು ಖಂಡಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಹುಬ್ಬಳ್ಳಿ ಕಾರ್ಪೋರೇಟರ್ ನಿರಂಜನ್ ಪುತ್ರಿ ನೇಹಾ ಹೀರೇಮಠ್ ರನ್ನು ಕಾಲೇಜು ಆವರಣದಲ್ಲೇ ಫಯಾಜ್ ಎಂಬಾತ ಬರ್ಬರವಾಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಇದಕ್ಕೆ ಮೊದಲು ಹಿಂದೂಗಳು ರಾಮನವಮಿ ಆಚರಿಸಿ ಬರುವಾಗ ಅನ್ಯ ಕೋಮಿನವರಿಂದ ಹಲ್ಲೆಯಾಗಿತ್ತು. ಇಂತಹದ್ದೇ ಹಲವು ಪ್ರಕರಣಗಳು ಇತ್ತೀಚೆಗೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.
ಇದೀಗ ಪ್ರತಿಪಕ್ಷ ಬಿಜೆಪಿ ಇದನ್ನೇ ರಾಜ್ಯ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಲು ಮುಂದಾಗಿದೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಇದರಲ್ಲಿ ಆಯಾ ಸ್ಥಳೀಯ ಬಿಜೆಪಿ ಮುಖಂಡರು ಭಾಗಿಯಾಗಲಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವೇ ದಿನ ಬಾಕಿಯಿದ್ದು ಈ ವೇಳೆ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ಮುಂದಾಗಿದೆ.