ನೇಹಾ ಹಂತಕನಿಗೆ ಕಠಿಣ ಶಿಕ್ಷೆ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ

Krishnaveni K

ಶನಿವಾರ, 20 ಏಪ್ರಿಲ್ 2024 (16:56 IST)
ಮೈಸೂರು: ಪ್ರತಿಪಕ್ಷಗಳು ನೇಹಾ ಪ್ರಕರಣವನ್ನು  ರಾಜಕೀಯಕ್ಕೆ  ಬಳಸುತ್ತಿದ್ದಾರೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ  ತಿಳಿಸಿದರು. ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದರು.
 
ನೇಹಾ ಕೊಲೆಯನ್ನು ನಾನು  ತೀವ್ರವಾಗಿ ಖಂಡಿಸುತ್ತೇನೆ ಎಂದ ಮುಖ್ಯಮಂತ್ರಿಗಳು, ಕೊಲೆಗಾರರನ್ನು ಕೂಡಲೇ ಬಂಧಿಸಲಾಗಿದೆ. ಇದು ಲವ್ ಜಿಹಾದ್ ಪ್ರಕರಣವಲ್ಲ.  ಸರ್ಕಾರ ತನಿಖೆಯನ್ನು ಗಂಭೀರವಾಗಿ ಕೈಗೊಂಡಿದ್ದು. ಕೊಲೆಗಾರನಿಗೆ ಉಗ್ರ ಶಿಕ್ಷೆ ನೀಡಲು ಪ್ರಯತ್ನ ಮಾಡಲಾಗುವುದು ಎಂದರು. 
 
ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು  ದುರ್ದೈವ
 
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಗ್ಗೆ ಮಾತನಾಡಿ ಎಲ್ಲಾ ಕಾಲದಲ್ಲಿಯೂ ಕೊಲೆಗಳಾಗಿವೆ. ಹಾಗೆಂದು ಕಾನೂನು ಸುವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಲ್ಲ. ಕರ್ನಾಟಕದಲ್ಲಿ ಇರುವಷ್ಟು ಶಾಂತಿ ಸುವ್ಯವಸ್ಥೆ ಬೇರೆ ರಾಜ್ಯಗಳಲ್ಲಿಲ್ಲ. ನಾವು ಯಾವುದೇ ಕೃತ್ಯ ನಡೆದರೂ, ಅದನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.  ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು  ದುರ್ದೈವ. ಖಂಡನೀಯ ಎಂದರು. ರಾಜ್ಯಾದ್ಯಂತ ಪ್ರತಿಭಟನೆಗಳಾಗುತ್ತಿರುವ ಬಗ್ಗೆ ಮಾತನಾಡಿ ಇದರ ಪರಿಣಾಮ ಸರ್ಕಾರದ ಮೇಲೆ ಆಗುವುದಿಲ್ಲ  ಎಂದರು.
 
ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ.
ರಾಜ್ಯದಲ್ಲಿ ಚುನಾವಣಾ ವಾತಾವರಣ ಉತ್ತಮವಾಗಿದ್ದು ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ. ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಮೋದಿಯವರ ಮೇಲೆ ಅವಲಂಬನೆಯಾಗಿದ್ದು, ಜನ ಮೋದಿ ಸರ್ಕಾರದ ವಿರುದ್ಧವಾಗಿದ್ದಾರೆ.ದೇಶದಲ್ಲಿ ಇಂಡಿಯಾ ಪರವಾದ ವಾತಾವರಣವಿದೆ ಎಂದರು.
 
ಬಿಜೆಪಿ ಸರ್ಕಾರ ಜನರಿಗೆ ಖಾಲಿ ಚೊಂಬು ಕೊಟ್ಟಿದೆ
ಕಾಂಗ್ರೆಸ್ ನ ಚೊಂಬು ಜಾಹೀರಾತನ್ನು ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದರ ಚಿನ್ಹೆ ಎಂದು ಬಿಜೆಪಿ ಮಾತನಾಡಿರುವ ಬಗ್ಗೆ ಮಾತನಾಡಿ  ನಿನ್ನೆ ಕೊಟ್ಟಿರುವ ಜಾಹೀರಾತು ಈ ದೇಶದ ಜನರಿಗೆ ಬಿಜೆಪಿ ಸರ್ಕಾರ ಖಾಲಿ ಚಂಬು ಕೊಟ್ಟಿದೆ ಎಂದು ತಿಳಿಸಲು ನೀಡಿದೆ. ದೇಶದ ಜನರಿಗೆ 15 ಲಕ್ಷ ಕೊಟ್ಟರೇ? 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು , ಅಚ್ಚೇ ದಿನ್ ಬಂದಿದೆಯೇ? ಅದಕ್ಕೆ ಚಂಬು ಕೊಟ್ಟಿದ್ದಾರೆ ಎಂದು ಜಾಹೀರಾತು ನೀಡಿದೆ ಎಂದರು. 
 
ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದು, 11 ತಿಂಗಳಲ್ಲಿ ಬೊಕ್ಕಸ ಖಾಲಿಯಾಗಿದೆ ನಮಗೆ ಭಿಕ್ಷೆ ಕೊಡಿ ಎಂಬ ಅರ್ಥದಲ್ಲಿ ಜಾಹೀರಾತು ನೀಡಿದೆ ಎಂದು ಬಿಜೆಪಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮೋದಿ ಕೊಟ್ಟಿರುವ ಆಶ್ವಾಸನೆಗಳನ್ನು ಒಂದನ್ನೂ ಈಡೇರಿಸಿಲ್ಲ.ದೇಶದ ಜನರಿಗೆ ಖಾಲಿ ಚಂಬು ನೀಡಿದ್ದಾರೆ ಎಂದು ಜಾಹೀರಾತು ನೀಡಿದ್ದೇವೆ. ಅವರು ಏನಾದರೂ ಹೇಳಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೊಕ್ಕಸ  ಖಾಲಿಯಾಗಿಲ್ಲ. ಎಲ್ಲಾ ಗ್ಯಾರಂಟಿ ಗಳನ್ನು  ಜಾರಿ ಮಾಡಿ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದೇವೆ ಎಂದರು.
 
ಭಯವಿರುವುದರಿಂದ ಬಿಜೆಪಿ  ಜೊತೆಗೆ ಜೆಡಿಎಸ್ ಮೈತ್ರಿ
ಏಣಿ ಹತ್ತಿಸಿ ನಂತರ ಸರ್ವನಾಶ ಮಾಡುತ್ತಾರೆ ಎಂದು ಹೆಚ್.ಡಿ  ಕುಮಾರಸ್ವಾಮಿ ಹೇಳಿರುವ ಬಗ್ಗೆ ಮಾತನಾಡಿ ಕುಮಾರಸ್ವಾಮಿ ಅವ ರು ಕೋಮುವಾದಿಗಳಾಗಿದ್ದು, ಜನತಾ ದಳ (ಎಸ್) ಪಕ್ಷವನ್ನು ರದ್ದು ಮಾಡಬೇಕು ಎಂದರು. ನನಗೆ ಅವರ ಬಗ್ಗೆ ಭಯವಿದ್ದರೆ ಇವರಿಬ್ಬರ ವಿರುದ್ಧ ಹೋರಾಟ ಮಾಡುತ್ತಿರಲಿಲ್ಲ. ಅವರಿಗೆ ಭಯವಿರುವುದರಿಂದ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ