ಕಮಿಷನ್ ತಗೊಂಡಿಲ್ಲ ಅಂತ ಬಿಜೆಪಿಯವರು ಮನೆದೇವರ ಮೇಲೆ ಆಣೆ ಮಾಡ್ಲಿ : ರಾಮಲಿಂಗಾ ರೆಡ್ಡಿ

ಮಂಗಳವಾರ, 15 ಆಗಸ್ಟ್ 2023 (14:30 IST)
ರಾಮನಗರ : ಬಿಜೆಪಿಯವರು ಮೊದಲು ಅವರ ಮನೆ ದೇವರ ಮೇಲೆ ಆಣೆ ಮಾಡಲಿ, ನಾವು 40% ಕಮಿಷನ್ ತೆಗೆದುಕೊಂಡಿಲ್ಲ, ವರ್ಗಾವಣೆ ದಂಧೆ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ ಅಂತ ಆಣೆ ಮಾಡಲಿ. ನಮ್ಮ ವಿರುದ್ಧ ಆರೋಪ ಮಾಡುವುದಕ್ಕೂ ನೈತಿಕತೆ ಬೇಕು ಎಂದು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
 
ಕಮಿಷನ್ ವಿಚಾರ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ರಾಮನಗರದಲ್ಲಿ ಅವರು ಪ್ರತಿಕ್ರಿಯಿಸಿದರು. ಇನ್ನೂ ಸರ್ಕಾರ ಟೇಕಾಫ್ ಆಗಿಲ್ಲ ಎಂಬ ವಿಪಕ್ಷಗಳ ಆರೋಪದ ಕುರಿತು ಮಾತನಾಡಿದ ಅವರು, ನಮ್ಮ ಸರ್ಕಾರ ಟೇಕಾಫ್ ಆಗಿ ಈಗಾಗಲೇ ಸಾವಿರಾರು ಕಿಲೋ ಮೀಟರ್ ಮುಂದೆ ಹೋಗಿದೆ. ಟೀಕೆ ಮಾಡುವವರು ಮಾಡಲಿ ಬಿಡಿ. ವಿರೋಧ ಪಕ್ಷದ ಕೆಲಸವೇ ಟೀಕೆ ಮಾಡುವುದು ಎಂದರು. 

ಸರ್ಕಾರದ ವಿರುದ್ಧ ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅಶ್ವಥ್ ನಾರಾಯಣ್ ಮಾತಿಗೆ ಅವರ ಪಕ್ಷದಲ್ಲೇ ಕಿಮ್ಮತಿಲ್ಲ. ಬಿಜೆಪಿ ನೀಡಿದ್ದ 610 ಭರವಸೆಯಲ್ಲಿ ಕೇವಲ 60 ಭರವಸೆಗಳನ್ನಷ್ಟೇ ಈಡೇರಿಸಿದೆ. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನಮ್ಮ ಸರ್ಕಾರ 2013ರಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಹಾಗಾಗಿ ಬಿಜೆಪಿಯವರ ಮಾತಿಗೆ ಮಹತ್ವ ಕೊಡಬೇಕಿಲ್ಲ. ನಾವು ಗ್ಯಾರೆಂಟಿಗಳ ಮೂಲಕ ಜನರನ್ನು ತಲುಪಿದ್ದೇವೆ ಎಂದು ತಿಳಿಸಿದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ