ಗಾಂಧಿ ಅಧಿವೇಶನ ಶತಮಾನೋತ್ಸವದಲ್ಲಿ ಭಾರತದ ನಕ್ಷೆಯಲ್ಲಿ ಕಾಂಗ್ರೆಸ್ ಎಡವಟ್ಟು: ಬಿಜೆಪಿ ಆಕ್ರೋಶ

Krishnaveni K

ಗುರುವಾರ, 26 ಡಿಸೆಂಬರ್ 2024 (12:54 IST)
ಬೆಳಗಾವಿ: ಮಹಾತ್ಮಾ ಗಾಂಧೀಜಿ ಬೆಳಗಾವಿಯಲ್ಲಿ ನಡೆಸಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹಾಕಲಾಗಿರುವ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ನಲ್ಲಿ ಭಾರತದ ನಕಾಶೆಯಲ್ಲಿ ತಪ್ಪುಗಳಾಗಿವೆ.

ಭಾರತದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಭಾಗ ಇಲ್ಲದೇ ಇರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಬಿಜೆಪಿ ವಾಗ್ದಾಳಿ ನಡೆಸಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಧಾರೆ ಎರೆದು ಕೊಟ್ಟಿದೆ ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ ಟೀಕಿಸಿದೆ.

ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶದ್ರೋಹ. ವೈಯುಕ್ತಿಕ ಸ್ವಾರ್ಥ ಸಾಧನೆಗಾಗಿ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಎಂತಹಾ ಹೀನ ಕೆಲಸಕ್ಕಾದರೂ "ಸಿದ್ದ" ಎಂಬುದಕ್ಕೆ ಬೆಳಗಾವಿಯಲ್ಲಿ ಹಾಕಿಸಿರುವ ಬ್ಯಾನರ್‌ಗಳೇ ಸಾಕ್ಷಿ.

ಸಿಎಂ ಸಿದ್ದರಾಮಯ್ಯ ಅವರೆ, ಕೂಡಲೇ ಈ ವಿವಾದಿತ ಬ್ಯಾನರ್ ಗಳನ್ನು ತೆರವುಗೊಳಿಸಿ, ಭಾರತದ ನಕಾಶೆಯನ್ನು ತಿರುಚಿದ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದೆ. ಜೊತೆಗೆ ಎಡವಟ್ಟಾಗಿರುವ ಫೋಟೋಗಳನ್ನೂ ಟ್ವೀಟ್ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ