ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಪಕ್ಷದಿಂದ ಉಚ್ಛಾಟಿಸಿರುವುದಕ್ಕೆ ಬಿಜೆಪಿ ಬೆಂಬಲಿಗರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಟ್ಟಾಗಿದ್ದಾರೆ. ಇನ್ನು ಮುಂದೆ ನಮ್ಮ ಬೆಂಬಲ ನಿಮಗಿರಲ್ಲ ಎಂದು ಕೆಲವರು ವಿಜಯೇಂದ್ರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಇಂದು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿ ಶಿಸ್ತು ಸಮಿತಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ವಿಜಯೇಂದ್ರ ಟ್ವೀಟ್ ಮಾಡಿ ಇದರಲ್ಲಿ ನನ್ನ ಪಾತ್ರವಿಲ್ಲ. ಹಲವು ದಿನಗಳ ವಿದ್ಯಮಾನ ಗಮನಿಸಿ ಪಕ್ಷ ಈ ಕ್ರಮ ಕೈಗೊಂಡಿದೆ ಎಂದಿದ್ದಾರೆ.
ಆದರೆ ವಿಜಯೇಂದ್ರ ಸ್ಪಷ್ಟನೆ ಹೊರತಾಗಿಯೂ ಯತ್ನಾಳ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಉತ್ತರ ಕರ್ನಾಟಕದ ಹುಲಿ, ಬಿಜೆಪಿಯ ಹಿಂದೂ ಹುಲಿಯನ್ನು ನೀವು ಕಟ್ಟಿ ಹಾಕಿದ್ದೀರಿ. ಇನ್ನು ಮುಂದೆ ನಮ್ಮ ಬೆಂಬಲ ನಿಮಗಿರಲ್ಲ ಎಂದು ಕೆಲವರು ಕಿಡಿ ಕಾರಿದ್ದಾರೆ.
ಶಿಸ್ತಿನ ಹೆಸರಿನಲ್ಲಿ ಒಬ್ಬ ಅಪ್ಪಟ ಹಿಂದೂವಾದಿ ನಾಯಕನನ್ನು ಪಕ್ಷದಿಂದ ಕಿತ್ತು ಹಾಕಿ ಪರೋಕ್ಷವಾಗಿ ಕಾಂಗ್ರೆಸ್ ಗೆ ಉಪಕಾರ ಮಾಡಿದಿರಿ. ಯತ್ನಾಳ್ ಹೊಂದಾಣಿಕೆ ರಾಜಕೀಯದ ಬಗ್ಗೆ ಮಾತನಾಡಿದ್ದು ಸರಿ ಎಂದು ಈಗ ಅನಿಸುತ್ತಿದೆ. ಮೊದಲೆಲ್ಲಾ ಆರ್ ಎಸ್ಎಸ್ ಹೇಳಿದ ಹಾಗೆ ನಾಯಕರ ನೇಮಕವಾಗುತ್ತಿತ್ತು. ಈಗ ಅಪ್ಪ-ಮಕ್ಕಳು ಹೇಳಿದ ಹಾಗೆ ನಾಯಕರನ್ನು ಕಿತ್ತು ಹಾಕಲಾಗುತ್ತಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.