ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಬೆಳವಣಿಗೆ ಸಂಬಂಧಿಸಿ ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಆರೋಪ ಪ್ರಕರಣದಲ್ಲಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ ಅವರ ಪತ್ನಿ ಎಸ್‌ಐಟಿ ಕಚೇರಿಯಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಜಯಂತ್ ಅವರ ಪತ್ನಿ ಬೆಂಗಳೂರಿನಿಂದ ಬೆಳಿಗ್ಗೆ ಬೆಳ್ತಂಗಡಿಗೆ ಬಂದು ಮಧ್ಯಾಹ್ನ 12 ಗಂಟೆಗೆ ಎಸ್ಐಟಿ ಅಧಿ
ಕಾರಿಗಳ ಬಳಿಗೆ ತೆರಳಿದ್ದರು. ಸಂಜೆ 4.30ರ ವರೆಗೂ ಮಾಹಿತಿ ಪಡೆದುಕೊಳ್ಳಲಾಯಿತು.
ಮಾಧ್ಯಮವೊಂದಕ್ಕೆ ಮಾತನಾಡಿದ ಜಯಂತ್, ನೋಟಿಸ್ ಬಂದಿತ್ತು. ನಾನು ಕೆಲವು ದಿನಗಳ ಹಿಂದೆ ಹೇಳಿಕೆ ದಾಖಲಿಸಿದ್ದೆ. ಪತ್ನಿಗೆ ಅನಾರೋಗ್ಯ ಇದ್ದ ಕಾರಣ ಸ್ವಲ್ಪ ತಡವಾಯಿತು. ಎಂಜಿನಿಯರಿಂಗ್ ಓದುತ್ತಿರುವ ಮಗನೊಂದಿಗೆ ತೆರಳಿ ಅವರು ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಬೇರೆ ಊರಿನಿಂದ ಹೋರಾಟಗಾರರು ಯಾರು ಬಂದರೂ ಅವರಿಗೆ ಊಟ, ಆಶ್ರಯ ನೀಡುವ ಸಂಪ್ರದಾಯ ಬೆಳೆಸಿಕೊಂಡಿದ್ದೇವೆ. ಸಾಕ್ಷಿ ದೂರುದಾರನಿಗೂ ಹಾಗೇ ಊಟ ಹಾಕಿದ್ದೆವು. ಎಸ್‌ಐಟಿಯವರು ಕರೆದಾಗ ಹೋಗುವುದು ನಮ್ಮ ಕರ್ತವ್ಯ. ಆದ್ದರಿಂದ ಮೂವರೂ ಹೇಳಿಕೆ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.