ಬೆಂಗಳೂರು: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಎರಡು ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಬಾಕಿ ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ (ಮಾರ್ಚ್ 22) ಬಿಡುಗಡೆ ಮಾಡಲಾಗುತ್ತದೆ ಎಂದು ಬಿಜೆಪಿ ಕೇಂದ್ರೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಅಂತಿಮವಾಗಿ ಚರ್ಚಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಕರ್ನಾಟಕ ರಾಜ್ಯದ ಉಳಿದ 5 ಕ್ಷೇತ್ರಗಳ ಕುರಿತು ಚರ್ಚೆ ನಡೆಸಲಾಗಿದೆ.
ಈ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮೂರನೇ ಪಟ್ಟಿ ಬಿಡುಗಡೆ ಬಳಿಕ ರಾಜ್ಯದ್ಯಾಂತ ಪ್ರವಾಸ ಆರಂಭಿಸಲಾಗುತ್ತದೆ ಎಂದು ನವದೆಹಲಿಯಲ್ಲಿ ಬುಧವಾರ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು.
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಕಾಂಗ್ರೆಸ್ ಸೆಳೆಯಲು ಯತ್ನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್‌ನಲ್ಲಿ ಸರಿಯಾದ ಅಭ್ಯರ್ಥಿಗಳಿಲ್ಲ. ಆದ್ದರಿಂದ ಬಿಜೆಪಿಯ ಅತೃಪ್ತ ನಾಯಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.