ಬೆಂಗಳೂರು: ನಾಡಿನ ರೈತಬಂಧುಗಳು ಭಯ ಪಡುವ ಅಗತ್ಯವಿಲ್ಲ, ರೈತರ ಒಂದು ಅಡಿ ಜಾಗವನ್ನು ಕಿತ್ತುಕೊಳ್ಳಲು ಬಿಜೆಪಿ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ಚನ್ನಪ್ಪ ಎಂಬುವವರು ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದು ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನು ಉಲ್ಲೇಖಿಸಿ ಸಾಮಾಜಿಕ ಜಾಲತತಾಣದ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮಾನಸಿಕವಾಗಿ ಆಘಾತಗೊಂಡು ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆಗೆ ಶರಣಾಗಿರುವುದು ತೀವ್ರ ಕಳವಳಕಾರಿ ಸುದ್ದಿಯಾಗಿದೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು, ತುಷ್ಟೀಕರಣ ರಾಜಕೀಯದ ಪರಾಕಾಷ್ಠೆಯ ಎಲ್ಲೆ ಮೀರಿದಂತೆ ವರ್ತಿಸುತ್ತಿರುವ ಸಚಿವರುಗಳಿಂದ ಅನ್ನದಾತರು ಹೆದರಿ ನೇಣಿಗೆ ಕೊರಳೊಡ್ಡುವ ಪರಿಸ್ಥಿತಿ ಬಂದೊದಗಿದ್ದು ದುರಂತವೇ ಸರಿ.
ನಾಡಿನ ರೈತಬಂಧುಗಳು ಭಯ ಪಡುವ ಅಗತ್ಯವಿಲ್ಲ, ಬಿಜೆಪಿ ರೈತರ ಒಂದು ಅಡಿ ಜಾಗವನ್ನು ಕಿತ್ತಿಕೊಳ್ಳಲು ಬಿಡುವುದಿಲ್ಲ, ಅಲ್ಲದೇ ಈ ಬಹುದೊಡ್ಡ ಪ್ರಮಾದ ಸಂಭವಿಸಲು ಕಾರಣವಾಗಿರುವ ಕಾಂಗ್ರೆಸ್ ಸರ್ಕಾರ ರೈತನ ಸಾವಿನ ಹೊಣೆ ಹೊರಬೇಕು. ಈ ಕೂಡಲೇ ವಕ್ಫ್ ಕಾಯ್ದೆ ಹಿಂಪಡೆದು, ಮೃತ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸುತ್ತೇನೆ.