ಬಾಗಲಕೋಟೆ: ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಬಿಜೆಪಿ ಅಭ್ಯರ್ಥಿಗಳ ಪರ ರಾಜ್ಯದಲ್ಲಿ ಬಿರುಸಿನ ಮತಬೇಟೆ ನಡೆಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಅವರು ಗುರುವಾರ ಮತಯಾಚನೆ ಮಾಡಿದರು.
ರಾಜ್ಯದಲ್ಲಿ ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಅಣ್ಣಾಮಲೈ ಪ್ರಚಾರ ನಡೆಸಿದ್ದಾರೆ. ಜಮಖಂಡಿ ಮತ್ತು ರಬಕವಿ ಬನಹಟ್ಟಿಯಲ್ಲಿ ಅವರು ಪ್ರಚಾರ ನಡೆಸಿದರು. ಈ ವೇಳೆ 2019ರ ಚುನಾವಣೆಯಂತೆ ಉತ್ತರ ಕರ್ನಾಟಕದ ಎಲ್ಲಾ 14 ಸ್ಥಾನಗಳನ್ನು ಬಿಜೆಪಿ ಈ ಬಾರಿಯೂ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸೋಲುತ್ತಾ ಇರುವ ಪಕ್ಷ. ಸೋಲುವವರು ಹತಾಶೆಯಲ್ಲಿ ಏನೇನೋ ಮಾತನಾಡುತ್ತಾರೆ. ನಾವು 10 ವರ್ಷ ಕೆಲಸ ಮಾಡಿದ್ದೇವೆ. ನಮ್ಮ ಕೆಲಸವನ್ನು ಜನರು ನೋಡಿದ್ದಾರೆ. ಇನ್ನೂ 5 ವರ್ಷ ಮೋದಿಜಿ ಬೇಕು. ಜನರು ಈ ಬಾರಿಯೂ ಎನ್ಡಿಎಯನ್ನು ಬೆಂಬಲಿಸಲು ತೀರ್ಮಾನ ಮಾಡಿದ್ದಾರೆ ಎಂದು ಅಣ್ಣಾಮಲೈ ಪ್ರತಿಕ್ರಿಯಿಸಿದರು.
ಸೋನಿಯಾಗಾಂಧಿ, ರಾಹುಲ್ ಗಾಂಧಿ ಪ್ರತಿನಿಧಿಸಿದ್ದ ಅಮೇಥಿ, ರಾಯಬರೇಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಆ ಹತಾಶೆಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ ಎಂದೂ ಅಣ್ಣಾಮಲೈ ಲೇವಡಿ ಮಾಡಿದರು.
ಅಣ್ಣಾಮಲೈ ಅವರು ತಮಿಳುನಾಡಿನ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ತಮಿಳುನಾಡಿನಲ್ಲಿ ಚುನಾವಣೆ ಆದ ಬಳಿಕ ಕೇರಳ ಹಾಗೂ ಕರ್ನಾಟಕದಲ್ಲಿ ಅವರು ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.