3 ಪಾಲಿಕೆಗಳಲ್ಲಿ ಬಿಜೆಪಿಗೇ ಅಧಿಕಾರ: ನಳಿನ್ ಕುಮಾರ್ ಕಟೀಲ್
ಸೋಮವಾರ, 30 ಆಗಸ್ಟ್ 2021 (20:09 IST)
ಬೆಂಗಳೂರು: ರಾಜ್ಯದ ಬೆಳಗಾವಿ, ಕಲಬುರ್ಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಲ್ಲಿ ಈ ಬಾರಿ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ತಿಳಿಸಿದರು.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರಕಾರವು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ರಾಜ್ಯ ಸರಕಾರವು ಶ್ರೀ ಯಡಿಯೂರಪ್ಪ ಮತ್ತು ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಸಿದ ಜನಪರ ಅಭಿವೃದ್ಧಿ ಕಾರ್ಯಗಳಿಂದ ಪಕ್ಷವು ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ಇದು ಪಕ್ಷವು ಮೂರೂ ನಗರಪಾಲಿಕೆಗಳಲ್ಲಿ ಅಧಿಕಾರ ಗಳಿಸಲು ಸಹಾಯ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿಗಳು ಮೊದಲ ಬಾರಿಗೆ ಬೆಳಗಾವಿಯಲ್ಲಿ ಪಕ್ಷದ ಚಿಹ್ನೆಯಡಿ ಕಣಕ್ಕೆ ಇಳಿದಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವುದು, ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಗಮನಿಸಿ ಪಕ್ಷವನ್ನು ಜನರು ಬೆಂಬಲಿಸಲಿದ್ದಾರೆ ಎಂದು ನುಡಿದರು.
ಹುಬ್ಬಳ್ಳಿ- ಧಾರವಾಡ ಪಾಲಿಕೆಯಲ್ಲಿ ಪಕ್ಷವು ಅಧಿಕಾರದಲ್ಲಿತ್ತು. ಅಲ್ಲಿನ ಜನತೆ ಮತ್ತೆ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ. ಕಲಬುರ್ಗಿಯಲ್ಲಿ ಬದಲಾವಣೆ ಆಗಲಿದೆ ಜನತೆ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಅವರು ವಿವರಿಸಿದರು. ಬೆಳಗಾವಿಯಲ್ಲಿ ಪಕ್ಷದ ವಿರುದ್ಧ ಬಂಡುಕೋರರಾಗಿ ಸ್ಪರ್ಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ವರದಿ ಪಡೆಯುವುದಾಗಿ ಪ್ರಶ್ನೆಗೆ ಅವರು ಉತ್ತರ ನೀಡಿದರು.
ಕಾಂಗ್ರೆಸ್ ಪಕ್ಷವು ಜೀವಂತ ಇದ್ದವರನ್ನೂ ಬದುಕಲು ಬಿಡಲಿಲ್ಲ. ಸತ್ತವರನ್ನೂ ಶವಸಂಸ್ಕಾರ ಮಾಡಲಿಲ್ಲ. ದೇಶದ ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಜೀವಂತ ಇದ್ದಾಗ ಅವರನ್ನು ಸತತವಾಗಿ ಕಡೆಗಣಿಸಿದ್ದ ಹಾಗೂ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದ ಕಾಂಗ್ರೆಸ್ ಪಕ್ಷವು ಬಳಿಕ ಅವರು ಸತ್ತಾಗ ದೆಹಲಿ ಮಾತ್ರವಲ್ಲದೆ ಮುಂಬೈಯಲ್ಲೂ ಸಣ್ಣ ಜಾಗ ಕೊಡಲಿಲ್ಲ. ಹಾಗಾಗಿ ಕಾಂಗ್ರೆಸ್‍ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ತಿಳಿಸಿದರು.
ಕಾಂಗ್ರೆಸ್‍ನ ಡಿ.ಕೆ.ಶಿವಕುಮಾರ್ ಅವರು ಯಾವತ್ತೂ ಕಾನೂನು ಗೌರವಿಸಿದವರಲ್ಲ. ಅದಕ್ಕಾಗಿಯೇ ಅವರು ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಲಕ್ಷಣ ಸವದಿ, ಶ್ರೀಮತಿ ಶಶಿಕಲಾ ಜೊಲ್ಲೆ, ಸಂಸದರಾದ ಈರಣ್ಣ ಕಡಾಡಿ, ಮಂಗಲಾ ಅಂಗಡಿ, ಶಾಸಕರಾದ ಸತೀಶ್ ರೆಡ್ಡಿ, ಅನಿಲ್ ಬೆನಕೆ, ರಾಜ್ಯ ವಕ್ತಾರರಾದ
ಎಂ.ಬಿ. ಜಿರಲಿ, ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.