ನಟ ಮತ್ತು ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಯಾರಿಗೆ ಗೊತ್ತಿಲ್ಲ ಹೇಳಿ. ಕೊರೊನಾ ಸಾಂಕ್ರಾಮಿಕ, ಲಾಕ್ಡೌನ್ ಸಮಯದಲ್ಲಿ ಎಲ್ಲರ ಪಾಲಿನ ನೆಚ್ಚಿನ ಹೀರೋಗಳಲ್ಲಿ ಒಬ್ಬರು ಸೋನು ಸೂದ್. ಸಿನಿಮಾಗಳಲ್ಲಿ ಹೆಚ್ಚು ವಿಲನ್ ಪಾತ್ರಗಳಲ್ಲಿ ಅಭಿನಯಿಸಿದ್ದರೂ, ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ. ಕೊರೊನಾ ಸಮಯದಲ್ಲಿ ಅನೇಕ ಜನರಿಗೆ ಇವರು ಸಹಾಯ ಮಾಡಿದ್ದಾರೆ.
ಈ ಹಿನ್ನೆಲೆ ಅವರು ಚುನಾವಣೆಗೆ ನಿಲ್ಲುತ್ತಾರೆ. ಯಾವುದಾದರೂ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿರುತ್ತದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ನಟ ಸೋನು ಸೂದ್, ತಾನು ಸದ್ಯ ಚುನಾವಣೆಗೆ ಧುಮುಕುವ ಯಾವುದೇ ಪ್ಲ್ಯಾನ್ ಇಲ್ಲ ಎಂದು ಹೇಳಿದರು. ತಾವು ಅಥವಾ ತನ್ನ ಸಹೋದರಿ ಮಾಳವಿಕಾ ಸಾಚಾರ್ ಪಮಜಾಬ್ನ ಮೊಗಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿಲ್ಲ ಎಂದು ನಟ ಮತ್ತು ಸಾಮಾಜಿಕ ಕಾರ್ಯಕರ್ತ ಹೇಳಿದರು.
ಮಾಳವಿಕಾ ಕಳೆದ ಕೆಲವು ತಿಂಗಳುಗಳಿಂದ ಈ ಪ್ರದೇಶದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರಿಂದ ಕಾಂಗ್ರೆಸ್ ಟಿಕೆಟ್ನಲ್ಲಿ ಮೊಗಾ ಕ್ಷೇತ್ರದಿಂದ ಸ್ಪರ್ಧಿಸುವ ಊಹಾಪೋಹಗಳು ಹಬ್ಬಿದ್ದವು. ಅಲ್ಲದೆ, ಸರ್ಕಾರಿ ಇಲಾಖೆಗಳೇ ಆಕೆಯನ್ನು ಸ್ಥಳೀಯ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಯಿತು.
"ಅವಳು ಸಮಾಜ ಸೇವೆ ಮಾಡಲು ಇಷ್ಟಪಡುತ್ತಾಳೆ. ಅವಳು ಜನರಿಗೆ ಸಹಾಯ ಮಾಡುವುದನ್ನು ಆನಂದಿಸುತ್ತಾಳೆ. ಸದ್ಯದ ಮಾಹಿತಿಯಂತೆ, ನಾವು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿಲ್ಲ ಎಂದು ನಟ ಸೋನು ಸೂದ್ ಹೇಳಿದರು. ಸೋನು ಸೂದ್ ಮೊಗಾಗೆ ಭೇಟಿ ನೀಡಿದಾಗಲೆಲ್ಲಾ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಭೇಟಿಯಾಗುತ್ತಿದ್ದರೂ, ರಾಜಕಾರಣಿಗಳೊಂದಿಗಿನ ತಮ್ಮ ಸಂಬಂಧ ವೈಯಕ್ತಿಕ ಮತ್ತು ವೃತ್ತಿಪರ ಸ್ವಭಾವದ್ದು ಮಾತ್ರ ಎಂದು ಹೇಳಿಕೊಂಡರು. ಮುಂಬೈ ಮೇಯರ್ ಚುನಾವಣೆಗೆ ಸೋನು ಸೂದ್ ಕಾಂಗ್ರೆಸ್ ಅಭ್ಯರ್ಥಿ..?
ಇನ್ನೊಂದೆಡೆ, 2022ರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗೆ ಮುಂಬಯಿ ಕಾಂಗ್ರೆಸ್ ಈಗಾಗಲೇ ಸಿದ್ಧತೆಯಲ್ಲಿದೆ. ಪಕ್ಷವು 25 ಪುಟಗಳ ಕರಡು ದಾಖಲೆ ಸಿದ್ಧಪಡಿಸಿದ್ದು, ಅದರಲ್ಲಿ ಮೇಯರ್ ಅಭ್ಯರ್ಥಿಯನ್ನು ಮುಂಚಿತವಾಗಿ ಘೋಷಿಸಬೇಕೆಂದು ಹೇಳುತ್ತದೆ. ನಟ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಪುತ್ರ ರಿತೇಶ್ ದೇಶಮುಖ್, ಮಾಡೆಲ್ ಮತ್ತು ಫಿಟ್ನೆಸ್ ಉತ್ಸಾಹಿ ಮಿಲಿಂದ್ ಸೋಮನ್ ಅಥವಾ ನಟ ಸೋನು ಸೂದ್ರಂತಹ ವ್ಯಕ್ತಿಗಳನ್ನು ಪಕ್ಷವು ಮೇಯರ್ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ವರದಿ ಹೇಳುತ್ತದೆ.
ಮೇಯರ್ ಅಭ್ಯರ್ಥಿಗೆ ಪ್ರಸ್ತಾಪಿಸಿದ ಈ ಯಾವ ಸೆಲೆಬ್ರಿಟಿಗಳೂ ಪ್ರಸ್ತುತ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲ. ರಿತೇಶ್ ದೇಶಮುಖ್ ರಾಜಕೀಯ ಹಿನ್ನೆಲೆ ಹೊಂದಿದ್ದರೂ, ಸದ್ಯಕ್ಕೆ ಅವರು ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸೋನು ಸೂದ್, ಕೋವಿಡ್ -19 ಮೊದಲನೇ ಅಲೆ ಹಾಗೂ ಎರಡನೇ ಅಲೆಯ ವೇಳೆಯೂ ಸಂಕಷ್ಟದಲ್ಲಿರುವ ಜನರಿಗೆ ಸಾಕಷ್ಟು ಸಹಾಯ ಮಾಡಿ ಸುದ್ದಿಯಲ್ಲಿದ್ದಾರೆ. ಮಿಲಿಂದ್ ಸೋಮನ್ ಅನೇಕರಿಗೆ ಫಿಟ್ನೆಸ್ ರೋಲ್ ಮಾಡೆಲ್ ಮತ್ತು ಮಾಜಿ ಟಿವಿ ಸ್ಟಾರ್.
ಮುಂಬೈ ಕಾಂಗ್ರೆಸ್ ಕಾರ್ಯದರ್ಶಿ ಗಣೇಶ್ ಯಾದವ್ 25 ಪುಟಗಳ ಕಾರ್ಯತಂತ್ರದ ದಾಖಲೆ ಸಿದ್ಧಪಡಿಸಿದ್ದು ಅದನ್ನು ಪಕ್ಷದ ನಾಯಕರು ಮತ್ತು ಎಐಸಿಸಿ ಮಹಾರಾಷ್ಟ್ರದ ಉಸ್ತುವಾರಿ ಕಾರ್ಯದರ್ಶಿ ಎಚ್.ಕೆ. ಪಾಟೀಲ್ ಎದುರು ಮಂಡಿಸಬೇಕಿದೆ.
ಗಣೇಶ್ ಯಾದವ್ ಪ್ರಕಾರ, ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯ್ ಜಗ್ತಾಪ್ ಈ ದಾಖಲೆ ಬಗ್ಗೆ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸುತ್ತಾರೆ. ಮೇಯರ್ ಅಭ್ಯರ್ಥಿಯು ರಾಜಕೀಯೇತರ ವ್ಯಕ್ತಿತ್ವ ಹೊಂದಿರಬೇಕು ಮತ್ತು ಯುವಕರಲ್ಲಿ ಉತ್ತಮ ಅನುಸರಣೆ ಹೊಂದಿರಬೇಕು ಎಂದು ಡಾಕ್ಯುಮೆಂಟ್ ಹೇಳಿದೆ. ಪಕ್ಷದ ಇಮೇಜ್ ಹೆಚ್ಚಿಸಿಕೊಳ್ಳುವ ಭಾಗವಾಗಿ, ಸ್ಟಾರ್ಟ್ ಅಪ್ ಮಾಲೀಕರು, ಯುವ ವೃತ್ತಿಪರರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಪಕ್ಷವು ಕೆಲವು ಟಿಕೆಟ್ಗಳನ್ನು ನೀಡುತ್ತದೆ ಎಂದು ಈ ದಾಖಲೆ ಸೂಚಿಸುತ್ತದೆ ಎಂದು ತಿಳಿದುಬಂದಿದೆ.