ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ: ಮರದ ಅಡಿಯಲ್ಲಿ ಜಿಲ್ಲಾಧಿಕಾರಿ ಕರ್ತವ್ಯ

Sampriya

ಶುಕ್ರವಾರ, 2 ಮೇ 2025 (14:49 IST)
Photo Courtesy X
ಬೆಂಗಳೂರು : ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ಕರಾಳ ನೆನಪು ಮಾಸುವ ಮುನ್ನವೇ ಚಾಮರಾಜನಗರ ಮತ್ತು ರಾಯಚೂರು ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಇಂದು ಮುಂಜಾನೆ 2.40ಕ್ಕೆ ಇ-ಮೇಲ್ ಸಂದೇಶ ಬಂದಿದೆ.

ಚಾಮರಾಜನಗರ ಜಿಲ್ಲಾಡಳಿತಕ್ಕೆ ಬಾಂಬ್ ಬೆದರಿಕೆ ಪತ್ರ ಇ-ಮೇಲ್​ನಲ್ಲಿ ಬಂದಿದೆ. ವಿಷಯ ತಿಳಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗಳಿಂದ ಹೊರಗೆ ಬಂದು ನಿಂತಿದ್ದಾರೆ. ಅಧಿಕಾರಿಗಳಲ್ಲಿ ಭೀತಿ ಉಂಟಾಗಿದೆ.

ತಮಿಳುನಾಡಿನ ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಉಲ್ಲೇಖಿಸಿ ಮೇಲ್ ಸಂದೇಶ ರವಾನೆ ಮಾಡಲಾಗಿದ್ದು, ಡಿಎಂಕೆ ನಾಯಕರ ಹೆಸರು ಉಲ್ಲೇಖಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಪೈಪ್​ಗಳಲ್ಲಿ ಅಡಗಿಸಿಟ್ಟಿರುವ ಬಾಂಬ್​ಗಳು ಸ್ಫೋಟಗೊಳಿಸುವುದಾಗಿ ಅಪರಿಚಿತ ಸಂದೇಶ ರವಾನೆ ಮಾಡಿದ್ದಾರೆ. ಸಂದೇಶ ತಿಳಿಯುತ್ತಿದ್ದಂತೆ ಡಿಸಿ ಶಿಲ್ಪಾನಾಗ್ ಹಾಗೂ ಎಸ್ಪಿ ಡಾ.ಬಿ.ಟಿ.ಕವಿತಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಕಚೇರಿಯಲ್ಲಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿ, ಜಿಲ್ಲಾಡಳಿತ ಭವನ ಆವರಣದೊಳಕ್ಕೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಬಾಂಬ್ ಪತ್ತೆ ದಳ ಮತ್ತು ಶ್ವಾನದಳವು ಜಿಲ್ಲಾಡಳಿತ ಭವನವನ್ನು ಜಾಲಾಡುತ್ತಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬಾಂಬ್ ಪತ್ತೆ ದಳ ಶೋಧ ಕಾರ್ಯ ನಡೆಸುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಭವನ ಆವರಣದ ಮರದ ಕೆಳಗೆ ಕುಳಿತು ಡಿಸಿ ಶಿಲ್ಪಾನಾಗ್, ಎಡಿಸಿ ಗೀತಾ ಹುಡೇದಾ ಹಾಗೂ ಜಿಪಂ ಸಿಇಒ ಮೋನಾ ರೋತ್ ಕರ್ತವ್ಯ ನಿರ್ವಹಿಸಿದ್ದು, ಗಮನ ಸೆಳೆಯಿತು‌.

ಜಿಲ್ಲಾಡಳಿತ ಭವನವನ್ನು ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ಚಾಮರಾಜನಗರ ಡಿಸಿ ಶಿಲ್ಪಾನಾಗ್ ಹೇಳಿದ್ದಾರೆ.‌ ಸೆನ್ ಠಾಣೆಗೆ ದೂರು ನೀಡಿದ್ದೇವೆ.ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ನೌಕರರನ್ನು ಹೊರಗೆ ಕಳಿಸಿದ್ದೇವೆ ಎಂದರು.

 ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳ ಭವನಕ್ಕೂ ಬಾಂಬ್ ಬೆದರಿಕೆ ಈ ಮೇಲ್ ಸಂದೇಶ ಬಂದಿದೆ. ನಗರದ ಹೊರವಲಯದ ಯಕ್ಲಾಸಪುರ ಗ್ರಾಮದ ಬಳಿ ಇರುವ ಹೊಸ ಜಿಲ್ಲಾಧಿಕಾರಿ ಕಚೇರಿಯ‌ನ್ನು ಸ್ಫೋಟಗೊಳಿಸುವುದಾಗಿ ಬೆಳಿಗ್ಗೆ 6:30ರ ವೇಳೆಗೆ ರಾಯಚೂರು ಜಿಲ್ಲಾಧಿಕಾರಿಗಳ ಇ-ಮೇಲ್ ಐಡಿಗೆ ಸಂದೇಶ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ