ಮೇಕೆದಾಟು ವಿಚಾರವಾಗಿ ಬೊಮ್ಮಾಯಿ, ಶೆಟ್ಟರ್ ಏನು ಮಾಡುತ್ತಾರೆ ಎಂದು ನೋಡೋಣ : ಡಿಕೆಶಿ
ಭಾನುವಾರ, 12 ಸೆಪ್ಟಂಬರ್ 2021 (14:30 IST)
ಹುಬ್ಬಳ್ಳಿ : 'ಮಹದಾಯಿ ಮತ್ತು ಮೇಕೆದಾಟು ವಿಚಾರವಾಗಿ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ ಶೆಟ್ಟರ್ ಅವರೇ ಮಾತನಾಡುತ್ತಿದ್ದರು. ಇದೀಗ ಅವರದ್ದೇ ಸರ್ಕಾರವಿದೆ. ಏನು ಮಾಡುತ್ತಾರೆ ಎಂದು ನೋಡೋಣ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕೊರೊನಾ ಸೋಂಕಿಗೆ ಅನೇಕರು ಮೃತಪಟ್ಟಿದ್ದಾರೆ. ಬಹುತೇಕರು ಆಸ್ಪತ್ರೆಯ ಹಣ ಪಾವತಿಸಲಾಗದೆ ಕಂಗಾಲಾಗಿದ್ದಾರೆ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆಲ್ಲ ಮೊದಲು ಸರ್ಕಾರ ಪರಿಹಾರ ನೀಡಬೇಕು. ಈ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುವುದು' ಎಂದು ತಿಳಿಸಿದರು.
'ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮ್ಮ ರಾಜ್ಯದ ನಾಯಕರು ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದರಿಂದ ನಿರೀಕ್ಷಿತ ಸ್ಥಾನದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ, ಒತ್ತಡಕ್ಕೆ ಮಣಿದು ಬೇರೆಯವರಿಗೆ ನೀಡಿದರು. ಇದರಿಂದಾಗಿ ಕೆಲವರು ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಅವರು ಸಹ ನಮ್ಮ ಸಂಪರ್ಕದಲ್ಲಿದ್ದು, ಪಕ್ಷದ ತತ್ವ ಸಿದ್ಧಾಂತದಲ್ಲಿಯೇ ಮುಂದುವರಿಯುವುದಾಗಿ ತಿಳಿಸಿದ್ದಾರೆ' ಎಂದು ಹೇಳಿದರು.
'ಚುನಾವಣಾ ಫಲಿತಾಂಶ ತಮಗೆ ಸಮಾಧಾನ ತಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಶಾಸಕ ಜಗದೀಶ ಶೆಟ್ಟರ್ ಹೇಳಲಿ ನೋಡೋಣ. ಸ್ಥಳೀಯವಾಗಿ ಮತದಾನದ ಹಕ್ಕು ಹಾಗೂ ಘಟಾನುಘಟಿ ನಾಯಕರಿದ್ದರೂ, ಬಹುಮತ ಪಡೆಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ತಮಗೆ ಬೇಕಾದ ಹಾಗೆ ವಾರ್ಡ್ ವಿಂಗಡಣೆ ಮಾಡಿ, ಮೀಸಲಾತಿ ಘೋಷಿಸಿಕೊಂಡು, ಚುನಾವಣೆ ನಡೆಸಿದರು. ಆದರೂ ಅವರಿಗೆ, ಅವಳಿನಗರದ ಮತದಾರರು ತಕ್ಕ ಉತ್ತರ ಪತ್ರ ನೀಡಿದ್ದಾರೆ' ಎಂದು ಅಭಿಪ್ರಾಯಪಟ್ಟರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಶಾಸಕ ಆರ್.ವಿ. ದೇಶಪಾಂಡೆ, ಶಿವಾನಂದ ಪಾಟೀಲ, ವೀರಣ್ಣ ಮತ್ತಿಗಟ್ಟಿ ಇದ್ದರು.