ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಿಂಗಳ ಹಿಂದೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿದ್ದರು. ಯಡಿಯೂರಪ್ಪ ದೆಹಲಿಯಿಂದ ಬರುವಾಗ ವಿಪಕ್ಷ ನಾಯಕನ ಹೆಸರನ್ನು ಫೈನಲ್ ಮಾಡಿಕೊಂಡೇ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಯಡಿಯೂರಪ್ಪ ಖಾಲಿ ಕೈಯಲ್ಲಿ ವಾಪಸಾಗಿದ್ರು..ಇದೀಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರುವ ಬೊಮ್ಮಾಯಿ, ವಿಪಕ್ಷ ನಾಯಕನ ಆಯ್ಕೆ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವಿಪಕ್ಷ ನಾಯಕನ ಸ್ಥಾನ ನನಗೆ ಕೊಡಿ ಎಂದು ಕೇಳಲು ಬಂದಿಲ್ಲ. ಆದರೆ, ಶೀಘ್ರ ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿದ್ದರೆ ನಕಾರಾತ್ಮಕ ಅಭಿಪ್ರಾಯ ಮೂಡುತ್ತದೆ ಎಂದು ಬೊಮ್ಮಾಯಿ ಅಮಿತ್ ಶಾ ಬಳಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ......ಯಾರನ್ನು ಬೇಕಾದರೂ ವಿಪಕ್ಷ ನಾಯಕ ಮಾಡಿ. ನಾವು ಕೆಲಸ ಮಾಡಿಕೊಂಡು ಹೋಗುತ್ತೇವೆ. ಒಬ್ಬರು ನಾಯಕರು ಅಂತ ಇದ್ದರೆ ಬೇರೆಯವರಿಗೂ ಹುರುಪು ಬರುತ್ತದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ವಿಪಕ್ಷ ನಾಯಕನಿಲ್ಲದಿದ್ದರೆ ಪಕ್ಷದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂದು ಬಸವರಾಜ ಬೊಮ್ಮಾಯಿ ಅಮಿತ್ ಶಾ ಬಳಿ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಬೊಮ್ಮಾಯಿ ಭೇಟಿ ವೇಳೆ ಅಮಿತ್ ಶಾ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾವ ರೀತಿ ಅನುಷ್ಠಾನ ಆಗುತ್ತಿದೆ. ಆರ್ಥಿಕ ಪರಿಸ್ಥಿತಿ ಹೇಗಿದೆ ಮತ್ತು ಗ್ಯಾರಂಟಿ ಯೋಜನೆಗಳಲ್ಲಿರುವ ಲೋಪಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಈಗ ಹೇಗೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದೀರೋ ಅದೇ ರೀತಿ ಮುಂದುವರಿಯಿರಿ. ಶೀಘ್ರದಲ್ಲಿ ಸಮಿತಿ ರಚಿಸಿ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.