ದಾವೋಸ್ ಗೆ ತೆರಳಿದ ಬೊಮ್ಮಾಯಿ

ಭಾನುವಾರ, 22 ಮೇ 2022 (18:20 IST)
ಬೆಂಗಳೂರು : ಸ್ವಿಟ್ಜರ್ಲೆಂಡಿನ ದಾವೋಸ್ನಲ್ಲಿ ಇಂದಿನಿಂದ ಆರಂಭವಾಗಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಬೊಮ್ಮಾಯಿ ನೇತೃತ್ವದ ನಿಯೋಗ ಇಂದು ರಾಜ್ಯದಿಂದ ಹೊರಟಿದೆ.

ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾರತವನ್ನೂ ಪ್ರತಿನಿಧಿಸಲಿರುವ ಸಿಎಂ ಬೊಮ್ಮಾಯಿಗೆ ಐಟಿಬಿಟಿ ಸಚಿವ ಡಾ.ಅಶ್ವಥ್ ನಾರಾಯಣ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಸಾತ್ ಕೊಟ್ಟಿದ್ದಾರೆ.

ಬೊಮ್ಮಾಯಿಯವರಿಗೆ ಸಿಎಂ ಆದ ಬಳಿಕ ಮೊದಲ ವಿದೇಶ ಪ್ರವಾಸ ಇದಾಗಿದೆ. ಇಂದು ಬೆಳಗ್ಗೆ 8:30ಕ್ಕೆ ತಮ್ಮ ಆರ್.ಟಿ.ನಗರದ ನಿವಾಸದಿಂದ ಪ್ಯಾಂಟ್, ಶರ್ಟ್ ಧರಿಸಿ ಸಾಮಾನ್ಯ ಉಡುಪಿನಲ್ಲೇ ದಾವೋಸ್ಗೆ ತೆರಳಿದರು. ಸಿಎಂ ಜೊತೆಗೆ ಅದ್ಧೂರಿ ಸೂಟ್ ಧರಿಸಿದ ಮುರುಗೇಶ್ ನಿರಾಣಿ ಹೊರಟರು.

ಇಂದು ಸಿಎಂ ಜೊತೆಗೆ ಒಟ್ಟು 8 ಜನರ ತಂಡ ದಾವೋಸ್ಗೆ ಪ್ರಯಾಣಿಸಿದೆ. ಸಿಎಂ ಅವರೊಂದಿಗೆ ಧರ್ಮಪತ್ನಿ ಚೆನ್ನಮ್ಮ, ಮುರುಗೇಶ್ ನಿರಾಣಿ ಮತ್ತು ನಿರಾಣಿಯವರ ಪತ್ನಿ, ನಿರಾಣಿ ಪಿಎ ಶರಣಬಸಪ್ಪ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತು ಅವರ ಪಿಎ, ಸಿಎಂ ಒಎಸ್ಡಿ ರೋಹನ್ ಬಿರಾದಾರ್ ದಾವೋಸ್ಗೆ ತೆರಳಿದರು. 

ದಾವೋಸ್ಗೆ ಹೋಗುವ ಮುನ್ನ ಆರ್ಟಿ ನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕಳೆದ ನಾಲ್ಕು ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ದೇಶಕ್ಕೆ ವಿದೇಶಿ ನೇರ ಬಂಡವಾಳ ಅತಿ ಹೆಚ್ಚು ಬಂದಿದೆ. ಇದರಲ್ಲಿ ನಂಬರ್ ಒನ್ ಪಾಲು ಕರ್ನಾಟಕಕ್ಕೆ ಹರಿದು ಬಂದಿದೆ. ನಾಳೆ ಮತ್ತು ನಾಡಿದ್ದು ದಾವೋಸ್ ವಿಶ್ವ ಆರ್ಥಿಕ ಒಕ್ಕೂಟದ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದೇವೆ.

ಸಮ್ಮೇಳನದಲ್ಲಿ ವಿಶ್ವದ ಹೆಸರಾಂತ ಪ್ರಮುಖರನ್ನು ಮತ್ತು ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಲಾಗುವುದು. ಹಲವಾರು ಜನ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ವಿಶೇಷವಾಗಿ ನವೆಂಬರ್ನಲ್ಲಿ ರಾಜ್ಯದಲ್ಲಿ ನಡೆಯಲಿರುವ ಗ್ಲೋಬಲ್ ಇನ್ವೆಸ್ಟ್ ಮೀಟ್ಗೆ ಬಹುದೊಡ್ಡ ಪ್ರತಿಕ್ರಿಯೆ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ