ಮಹಾಮಳೆಗೆ ಗಡಿಜಿಲ್ಲೆ ತತ್ತರ; 150ಕ್ಕೂ ಹೆಚ್ಚು ಮನೆ ನೆಲಸಮ

ಸೋಮವಾರ, 5 ಆಗಸ್ಟ್ 2019 (18:19 IST)
ಮಹಾರಾಷ್ಟ್ರದಲ್ಲಿ ಧಾರಕಾರ ಮಳೆ ಸುರಿಯುತ್ತಿರೋದು ಗಡಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಂದಿಟ್ಟಿದೆ. ಏತನ್ಮಧ್ಯೆ 150ಕ್ಕೂ ಹೆಚ್ಚು ಮನೆಗಳು ಗಡಿ ಜಿಲ್ಲೆಯಲ್ಲಿ ನೆಲಕಚ್ಚಿದ್ದು ಜನತೆಯನ್ನು ಹೈರಾಣಾಗಿಸಿದೆ.

ಬೆಳಗಾವಿಯ ಖಾನಾಪುರದಲ್ಲಿ ಮಳೆರಾಯನ ಆರ್ಭಟಕ್ಕೆ 139 ಕ್ಕೂ ಅಧಿಕ ಮನೆಗಳ ಗೋಡೆ ಕುಸಿತಗೊಂಡಿವೆ.

ಖಾನಾಪುರ ತಾಲೂಕಿನ ಮಲಪ್ರಭೆಯ ಉಗಮ ಸ್ಥಾನದ ಸುತ್ತಲೂ ಹಾಗೂ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಸೇತುವೆಗಳ ಜಲಾವೃತಗೊಂಡಿವೆ. ಗದ್ದೆಗಳು ಮುಳುಗಡೆಗೊಂಡಿವೆ. ಈವರೆಗೆ ಬರೋಬ್ಬರಿ 139ಕ್ಕೂ ಅಧಿಕ ಮನೆಗಳ ಗೋಡೆ ಕುಸಿದು ಜನ ಜೀವನಕ್ಕೆ ಅಡಚಣೆ ಉಂಟು ಮಾಡಿದೆ.

ಹೀರೆ ಅಂಗ್ರೋಳ್ಳಿ, ಮಂಗೆನಮಕೊಪ್ಪ, ಲಿಂಗನಮಠ, ಚುಂಚವಾಡ, ದೇವಲತ್ತಿ, ಸಾವರಗಾಳಿ ಹೀಗೆ ಹಲವಾರು ಗ್ರಾಮಗಳಲ್ಲಿ ಮಳೆಯ ರಭಸಕ್ಕೆ ಮನೆಗಳ ಗೋಡೆ ಕುಸಿದಿವೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಆದರೆ ಹಾನಿಗೊಳಗಾದ ಸಂತ್ರಸ್ತರಿಗೆ ಅದೆಷ್ಟೋ ಬೇಗ ಪರಿಹಾರ ಒದಗಿಸುತ್ತಾರೋ ಕಾದು ನೋಡುವ ಪರಿಸ್ಥಿತಿ ಎದುರಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ