ಬೆಂಗಳೂರು: ರಾಜ್ಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಧಾನಮಂತ್ರಿ ಜನಔಷಧಿ ಕೇಂದ್ರಗಳಿಗೆ ಅವಕಾಶ ನೀಡುವುದಿಲ್ಲ ಎಂಬ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ಅತ್ಯಂತ ಜನವಿರೋಧಿ ಕ್ರಮ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಇದು ರಾಜಕೀಯ ಪ್ರೇರಿತ ನಿರ್ಧಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಬಡವರು, ಜನಸಾಮಾನ್ಯರಿಗೆ ಅಗ್ಗದ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಒದಗಿಸುತ್ತಿರುವ ಜನ ಔಷಧಿ ಕೇಂದ್ರಗಳಿಗೆ ಅವಕಾಶ ನೀಡದಿರಲು ಕಾರಣವೇನು? ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ಸಿಗುವುದಕ್ಕೂ ಜನ ಔಷಧಿ ಕೇಂದ್ರಗಳಿಗೆ ಅವಕಾಶ ನೀಡದಿರುವುದಕ್ಕೂ ಸಂಬಂಧವೇನು?
ಇಂದಿರಾ ಕ್ಯಾಂಟೀನ್ ಗಳಲ್ಲಿ ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ ಎನ್ನುವ ಕಾರಣಕ್ಕೆ ಬೇರೆ ಹೋಟೆಲ್ ಗಳು ತೆರೆಯಲು ಅವಕಾಶ ನೀಡುವುದಿಲ್ಲ ಎನ್ನುವುದಕ್ಕೆ ಸಾದ್ಯವೇ?
ಜನರು ತಮಗೆ ಸಕಾಲಕ್ಕೆ, ಕೈಗೆಟಕುವ ಬೆಲೆಗೆ, ಉತ್ತಮ ಗುಣಮಟ್ಟದ ಔಷಧಿ ಎಲ್ಲಿ ಸಿಗುತ್ತದೋ ಅಲ್ಲಿ ಖರೀದಿ ಮಾಡುತ್ತಾರೆ.
ಸಿಎಂ ಸಿದ್ದರಾಮಯ್ಯನವರೇ, ರಾಜ್ಯ ಸರ್ಕಾರ ಕಾರ್ಪೊರೇಟ್ ಔಷಧ ಕಂಪನಿಗಳು, ಖಾಸಗಿ ಮೆಡಿಕಲ್ ಶಾಪ್ ಗಳು ಲಾಬಿಗೆ ಮಣಿದು ಜನ ಔಷಧಿ ಕೇಂದ್ರಗಳಿಗೆ ಅವಕಾಶ ನೀಡುತ್ತಿಲ್ಲವೋ ಅಥವಾ ಪ್ರಧಾನಮಂತ್ರಿಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಿದೆ ಎಂಬ ಅಸೂಯೆಯೋ?