ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಮಾಡಬಾರದ ತಪ್ಪುಗಳನ್ನು ಮಾಡಿ ಈಗ ಪಶ್ಚಾತ್ತಾಪ ಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರನ್ನು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಸಾಗುತ್ತಿರುವುದು ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ಯಲ್ಲ. ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆಯ ಪಶ್ಚಾತ್ತಾಪದ ಯಾತ್ರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದಲ್ಲಿ ಕೇಂದ್ರ ಸರಕಾರದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಸಾಲ ಮನ್ನಾ ಮಾಡಾಸುತ್ತೇವೆ ಎಂದಿದ್ದ ಯಡಿಯೂರಪ್ಪ, ಇದೀಗ ಪ್ರಧಾನಿ ಮೋದಿ ಬಳಿ ತೆರಳಿ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಗುಡುಗಿದರು.
ಪ್ರಧಾನಿ ಮೋದಿಯಿಂದ ದೇಶದ ಬಡವರಿಗೆ, ರೈತರಿಗೆ, ಶೋಷಿತರಿಗೆ, ಆರ್ಥಿಕವಾಗಿ ದುರ್ಬಲರಾದವರಿಗೆ ಅಚ್ಚೇದಿನ್ ಬರಲಿಲ್ಲ. ಆದರೆ, ಬಿಜೆಪಿ ಮುಖಂಡರಿಗೆ ಮಾತ್ರ ಅಚ್ಚೇ ದಿನ್ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಯಾವ ಉದ್ದೇಶಕ್ಕಾಗಿ ಪರಿವರ್ತನಾ ಯಾತ್ರೆ ಮಾಡುತ್ತಿದೆ. ಪರಿವರ್ತನೆಯಾಗಬೇಕಾಗಿರುವುದು ಬಿಜೆಪಿ ನಾಯಕರಲ್ಲಿ. ಬಿಜೆಪಿಯವರು ಕೋಮುವಾದವನ್ನು ತೊರೆದು ಜಾತ್ಯಾತೀತವಾದವನ್ನು ಅಳವಡಿಸಿಕೊಳ್ಳಲಿ. ರಾಜ್ಯದಲ್ಲಿರುವ ಪ್ರತಿಯೊಂದು ಸಮುದಾಯದ ಅಭಿವೃದ್ಧಿಗೆ ಶ್ರಮಿಸುವತ್ತ ಪರಿವರ್ತನೆ ಮಾಡಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.
ರಾಜ್ಯದ ಮುಖ್ಯಮಂತ್ರಿಯೊಬ್ಬರ ಬಗ್ಗೆ ಕೀಳಾಗಿ ಮಾತನಾಡುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ನೈತಿಕತೆಯಿದೆಯಾ? ದೇಶದ ಇತಿಹಾಸ ಅವನಿಗೆ ಗೊತ್ತಿದೆಯಾ? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.