ಬೆಂಗಳೂರು(ಜು.27): ಕಳೆದ ಕೆಲ ಸಮಯದಿಂದ ಕೇಳಿ ಬಂದಿದ್ದ ಎಲ್ಲಾ ಗೊಂದಲಗಳಿಗೂ ಬಿ. ಎಸ್. ಯಡಿಯೂರಪ್ಪನವರ ರಾಜೀನಾಮೆ ತೆರೆ ಎಳೆದಿದೆ. ಬಿಎಸ್ವೈ ರಾಜೀನಾಮೆ ಒಂದೆಡೆ ಅವರ ವಿರೋಧಿ ಬಣವನ್ನು ಸಂತಸಕ್ಕೀಡು ಮಾಡಿದ್ದರೆ, ವಿರೋಧ ಪಕ್ಷಗಳಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುವಂತೆ ಮಾಡಿದೆ. ಆದರೆ ಇವೆಲ್ಲದರ ನಡುವೆ ಬಿಎಸ್ವೈ ಅಭಿಮಾನಿಗಳು ಮಾತ್ರ ಆಘಾತಕ್ಕೊಳಗಾಗಿದ್ದಾರೆ. ಅತ್ತ ಬಿಎಸ್ವೈ ತವರು ಕ್ಷೇತ್ರ ಶಿಕಾರಿಪುರದಲ್ಲಿ ನೀರವ ಮೌನ ಮನೆ ಮಾಡಿದೆ.
ಇನ್ನು ಬಿಎಸ್ವೈ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ವಿರುದ್ಧ ಗುಡುಗಿದ್ದ ದಿಂಗಾಲೇಶ್ವರ ಸ್ವಾಮೀಜಿಗಳು ಬಿಎಸ್ವೈ ಕಣ್ಣೀರಿನಿಂದ ಕಮಲ ಪಾಳಯ ಕೊಚ್ಚಿ ಹೋಗುತ್ತದೆ ಎಂದು ಭವಿಷ್ಯ ನಡಿದಿದ್ದರು. ಆದರೀಗ ತಮ್ಮ ನೆಚ್ಚಿನ ನಾಯಕ ಪದತ್ಯಾಗ ಮಾಡಿದ ಬೆನ್ನಲ್ಲೇ ಗುಂಡ್ಲುಪೇಟೆಯ ಅವರ ಬೆಂಬಲಿಗರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿರುವ ಬಿ. ಎಸ್. ಯಡಿಯೂರಪ್ಪ ನನ್ನ ರಾಜೀನಾಮೆಯಿಂದ ಮನನ್ನೊಂದ ಗುಂಡ್ಲುಪೇಟೆ ತಾ॥ ಬೊಮ್ಮಲಾಪುರದ ರಾಜಪ್ಪ (ರವಿ) ಆತ್ಮಹತ್ಯೆಗೆ ಶರಣಾದ ಸುದ್ದಿ ಅತೀವ ನೋವು ಹಾಗೂ ಬೇಸರ ತರಿಸಿದೆ.ರಾಜಕಾರಣದಲ್ಲಿ ಏರಿಳಿತಗಳು ಸಹಜ ,ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು, ಇದರಿಂದ ಕುಟುಂಬಕ್ಕಾಗುವ ನಷ್ಟ ಯಾರಿಂದಲೂ ಭರಿಸಲಾಗದು ಎಂದಿದ್ದಾರೆ.
ಅಲ್ಲದೇ ಅಭಿಮಾನಿಗಳಿಗೂ ಕಿವಿಮಾತು ಹೇಳಿರುವ ಬಿಎಸ್ವೈ ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಕೈಮುಗಿದು ವಿನಂತಿಸುವೆ. ರವಿ ಕುಟುಂಬದ ನೋವಿನೊಂದಿಗೆ ನಾನಿರುವೆ ಎಂದೂ ಮನವಿ ಮಾಡಿದ್ದಾರೆ.