ಬಿಎಸ್ವೈ 4 ಬಾರಿ ಸಿಎಂ, ಒಮ್ಮೆಯೂ 5 ವರ್ಷ ಇಲ್ಲ!

ಮಂಗಳವಾರ, 27 ಜುಲೈ 2021 (08:27 IST)
ಬೆಂಗಳೂರು(ಜು.27): ರಾಜ್ಯದ ನಾಲ್ಕು ಬಾರಿ ಮುಖ್ಯಮಂತ್ರಿ ಪದವಿ ಅಲಂಕರಿಸಿದರೂ ಪೂರ್ಣಾವಧಿ ಆಡಳಿತ ನಡೆಸದ ನಾಯಕರ ಸಾಲಿಗೆ ಬಿ.ಎಸ್.ಯಡಿಯೂರಪ್ಪ ಅವರು ಸೇರಿದ್ದಾರೆ.

* ಪೂರ್ಣಾವಧಿ ಆಡಳಿತ ನಡೆಸದ ನಾಯಕರ ಸಾಲಿಗೆ ಬಿ.ಎಸ್.ಯಡಿಯೂರಪ್ಪ
* ಬಿಎಸ್ವೈ 4 ಬಾರಿ ಸಿಎಂ, ಒಮ್ಮೆಯೂ 5 ವರ್ಷ ಇಲ್ಲ
 * ಅಧಿಕಾರ ಗದ್ದುಗೇರಿದ ಬಳಿಕವು ಅದೂ ಮುಳ್ಳಿನ ಹಾದಿಯಾಗಿತ್ತೇ ಹೊರತು ಸುಗಮವಾಗಿರಲಿಲ್ಲ

ನಾಲ್ಕು ಬಾರಿಯೂ ಅವರಿಗೆ ಮುಖ್ಯಮಂತ್ರಿ ಸ್ಥಾನವೂ ಸುಲಭವಾಗಿ ದಕ್ಕಲಿಲ್ಲ. ಹೋರಾಟ, ರಾಜಕೀಯ ತಂತ್ರಗಾರಿಕೆ, ಸ್ವಪಕ್ಷ ಮತ್ತು ವಿರೋಧ ಪಕ್ಷಗಳ ನಾಯಕರ ಜತೆ ಸೆಣೆಸಾಡುತ್ತಲೇ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಗದ್ದುಗೇರಿದ ಬಳಿಕವು ಅದೂ ಮುಳ್ಳಿನ ಹಾದಿಯಾಗಿತ್ತೇ ಹೊರತು ಸುಗಮವಾಗಿರಲಿಲ್ಲ.
2006ರಲ್ಲಿ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯದ ಮೂಲಕ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಯಿತು. ಮೊದಲ ಬಾರಿಗೆ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. ಕೊನೆಗೆ ಮಿತ್ರ ಪಕ್ಷಗಳಲ್ಲಿ ಹಗ್ಗಾಜಗ್ಗಾಟ ನಡೆದು ಯಡಿಯೂರಪ್ಪ 2007ರ ನವೆಂಬರ್ 12ರಂದು ಮೊದಲ ಬಾರಿಗೆ ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾಗಿ ವಿಧಾನಸೌಧ ಪ್ರವೇಶಿಸಿದರು. ಜೆಡಿಎಸ್ ಜತೆಗಿನ ಸ್ನೇಹ ಮುರಿದು ಬಿದ್ದು ಕೇವಲ 7 ದಿನಕ್ಕೆ ಮುಖ್ಯಮಂತ್ರಿ ಪದವಿಗೆ ಅವರು ರಾಜೀನಾಮೆ ನೀಡುವಂತಾಯಿತು.
ನಂತರ ಚುನಾವಣೆಯಲ್ಲಿ ಗೆದ್ದು ಎರಡನೇ ಬಾರಿಗೆ 2008ರ ಮೇ 30 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿ 2011ರ ಜುಲೈ 31ರಂದು ಅವರು ಪದತ್ಯಾಗ ಮಾಡಿದರು. ಮೂರನೇ ಬಾರಿಗೆ 2018ನೇ ಮೇ 17ರಂದು ಅಧಿಕಾರ ಸ್ವೀಕರಿಸಿದರು. ಆದರೆ ವಿಶ್ವಾಸಮತ ಸಿಗದ ಕಾರಣಕ್ಕೆ ಎರಡೇ ದಿನಕ್ಕೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. 2019ರ ಜು.26 ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಎರಡು ವರ್ಷಗಳಲ್ಲೇ ಅಧಿಕಾರ ಬಿಟ್ಟು ಹೊರಟಿದ್ದಾರೆ. ಈ ನಾಲ್ಕು ಅವಧಿಯಲ್ಲಿ ಯಡಿಯೂರಪ್ಪ ಅವರು ಒಟ್ಟಾರೆ 5 ವರ್ಷ, 2 ತಿಂಗಳು 11 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದಂತಾಗಿದೆ.
80ರ ದಶಕದ ನಂತರ ಆಡಳಿತ ನಡೆಸಿದ ಎಸ್.ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರು ಐದು ವರ್ಷಗಳ ಕಾಲ ಆಡಳಿತ ನಡೆಸಲು ಆಗಲಿಲ್ಲ. ಈ ಪೈಕಿ ಡಿ.ವಿ.ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಅವರು ಮಧ್ಯಂತರ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದರು.
- 2007ರಲ್ಲಿ ಮೊದಲ ಬಾರಿ: 7 ದಿನ
- 2008ರಲ್ಲಿ ಎರಡನೇ ಬಾರಿ: 3 ವರ್ಷ
- 2018ರಲ್ಲಿ ಮೂರನೇ ಬಾರಿ: 2 ದಿನ
- 2019ರಲ್ಲಿ ನಾಲ್ಕನೇ ಬಾರಿ: 2 ವರ್ಷ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ