ಬೆಂಗಳೂರು(ಜು.27): ಕಳೆದ ಒಂದು ವರ್ಷದಿಂದ ರಾಜ್ಯ ನಾಯಕತ್ವ ಬದಲಾವಣೆಯಾಗಲಿದೆ ಎಂಬ ವದಂತಿ ಕೊನೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡುವುದರೊಂದಿಗೆ ನಿಜವಾಗಿದೆ.
* ಸರ್ಕಾರ ಅಸ್ತಿತ್ವಕ್ಕೆ ಬಂದ ದಿನವೇ ಯಡಿಯೂರಪ್ಪ ರಾಜೀನಾಮೆ
* 1 ವರ್ಷದಿಂದ ರಾಜೀನಾಮೆ ವದಂತಿ, ಈಗ ನಿಜ
* ಯತ್ನಾಳ್ ಆರೋಪದೊಂದಿಗೆ ಶುರುವಾದ ಸಿಎಂ ಬದಲು ಚರ್ಚೆ
ಸರ್ಕಾರ ರಚನೆಯಾಗಿ 8-10 ತಿಂಗಳ ನಂತರ ಸಣ್ಣದಾಗಿ ಶುರುವಾದ ನಾಯಕತ್ವ ಬದಲಾವಣೆ ವಿಚಾರವನ್ನು ಯಡಿಯೂರಪ್ಪ ಅವರೊಂದಿಗೆ ಮುನಿಸಿಕೊಂಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮುಖ್ಯಮಂತ್ರಿ ಸ್ಥಾನ ಬದಲಾಗಲಿದೆ ಎಂಬ ಹೇಳಿಕೆ ನೀಡುವ ಮೂಲಕ ದೊಡ್ಡದು ಮಾಡಿದರು. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಬಹಿರಂಗವಾಗಿ ಆರೋಪ ಮಾಡಲಾರಂಭಿಸಿದರು. ಇದಕ್ಕೆ ಪೂರಕವಾಗಿ ಸಚಿವರಾದ ಬಳಿಕ ಸಿ.ಪಿ.ಯೋಗೇಶ್ವರ್ ಬಹಿರಂಗವಾಗಿ ಹೈಕಮಾಂಡ್ ಬಳಿ ಹೋಗಿ ದೂರು ನೀಡಿದರು. ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಇಲಾಖೆಗೆ ಸಂಬಂಧ ಪಟ್ಟಂತೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆಂದು ರಾಜ್ಯಪಾಲರಿಗೆ ದೂರುವ ಮಟ್ಟಕ್ಕೆ ಪರಿಸ್ಥಿತಿ ಹೋಯಿತು. ಈ ಮಧ್ಯೆ ಕೆಲವು ಸಚಿವರು ಗುಪ್ತವಾಗಿ ರಾಷ್ಟ್ರೀಯ ನಾಯಕರ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸತೊಡಗಿದರು.
ಇಷ್ಟೆಲ್ಲಾ ವದಂತಿಗಳು ಹೆಚ್ಚಾದರೂ ಬಿಜೆಪಿ ಹೈಕಮಾಂಡ್ ಮಾತ್ರ ರಾಜ್ಯದಲ್ಲಿ ಯಾವುದೇ ರೀತಿಯಾಗಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಹೇಳಿಕೆಯನ್ನೇ ನೀಡುತ್ತಿತ್ತು. ಈ ನಡುವೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂ.ಪಿ.ರೇಣುಕಾಚಾರ್ಯ ಮತ್ತು ಯಡಿಯೂರಪ್ಪ ವಿರೋಧಿ ಬಣದ ನಡುವೆ ವಾಕ್ಸಮರಗಳು ನಡೆದವು. ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲವು ನಾಯಕರು ಹೇಳಿದರೆ, ಇನ್ನು ಕೆಲವರು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಮೌನಕ್ಕೆ ಶರಣಾದರು.
ಈ ಮಧ್ಯೆ ಬಣಗಳ ನಡುವೆ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಾಗ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿ ಬೆಂಗಳೂರಲ್ಲಿಯೇ ನೆಲೆಸಿ ಎಲ್ಲ ಶಾಸಕರ ಅಭಿಪ್ರಾಯಗಳನ್ನು ಕೇಳಿದರು. ಈ ವೇಳೆಯೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಾವಣೆ ಮಾಡಲಾಗುತ್ತದೆ ಎಂಬುದು ಕೇವಲ ವದಂತಿ ಮಾತ್ರ ಎಂದು ಹೇಳಿದರು. ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಇತ್ತೀಚೆಗೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ವರಿಷ್ಠರನ್ನು ಭೇಟಿಯಾಗಿ ರಾಜ್ಯಕ್ಕೆ ಹಿಂತಿರುಗಿದ ಯಡಿಯೂರಪ್ಪ ನಗುಮೊಗದಲ್ಲಿಯೇ ಮುಂದಿನ ಎರಡು ವರ್ಷ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿಕೆ ನೀಡಿದ್ದರು. ಈ ಎಲ್ಲದರ ನಡುವೆ ತೆರೆಮರೆಯಲ್ಲಿ ನಾಯಕತ್ವದ ಬದಲಾವಣೆ ಮಾಡುವ ಪ್ರಕ್ರಿಯೆ ಬಿಜೆಪಿ ಹೈಕಮಾಂಡ್ನಲ್ಲಿ ನಡೆಯುತ್ತಿತ್ತು.
ಹಿರಿಯ ಮುಖಂಡರಾದ ಜಗದೀಶ ಶೆಟ್ಟರ್, ಬಿ.ಶ್ರೀರಾಮುಲು ಸೇರಿದಂತೆ ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್, ಸಿ.ಪಿ.ಯೋಗೇಶ್ವರ್ ಅವರು ದೆಹಲಿಗೆ ತೆರಳಿ ನಾಯಕರನ್ನು ಭೇಟಿ ಮಾಡಿದ ಪ್ರಸಂಗಗಳು ನಡೆದವು.
ಕಳೆದ ಒಂದು ವಾರದಿಂದ ಇದ್ದಕ್ಕಿದ್ದಂತೆ ನಾಯಕತ್ವ ಬದಲಾವಣೆ ಮಾತುಗಳು ಮುಗಿಲು ಮುಟ್ಟಿದವು. ಹೊಸ ನಾಯಕತ್ವ ಯಾರಿಗೆ ಸಿಗಲಿದೆ ಎಂಬ ಚರ್ಚೆಗಳು ಬಿರುಸಾಗಿ ನಡೆಯತೊಡಗಿದವು. ಶಾಸಕ ಅರವಿಂದ ಬೆಲ್ಲದ್, ಸಚಿವ ಮುರುಗೇಶ್ ನಿರಾಣಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಇತರೆ ಕೆಲವರ ಹೆಸರು ಸಹ ಮುಖ್ಯಮಂತ್ರಿಯ ರೇಸ್ನಲ್ಲಿ ಸೇರಿಕೊಂಡಿತು. ಇದಕ್ಕೆಲ್ಲ ಕೊನೆ ಎಂಬಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಗೂ ಮುನ್ನ ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ಸುಳಿವನ್ನು ನೀಡಿದರು. ಈ ಮೂಲಕ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಖಚಿತ ಎಂಬ ಸಂದೇಶವನ್ನು ಸಾರಿದರು.
ಭಾನುವಾರ ಹೈಕಮಾಂಡ್ನಿಂದ ಸಂದೇಶ ಬಂದ ಬಳಿಕ ಮುಂದಿನ ತೀರ್ಮಾನ ಎಂದಿದ್ದರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ ಸಾಧನಾ ಸಮಾವೇಶದಲ್ಲಿ ರಾಜೀನಾಮೆ ನೀಡುವ ಬಗ್ಗೆ ಪ್ರಕಟಿಸಿದರು. ಸರ್ಕಾರ ಅಸ್ತಿತ್ವಕ್ಕೆ ಬಂದ ದಿನೇ ಪದತ್ಯಾಗ ಮಾಡಿದರು ಎಂಬುದು ವಿಶೇಷ.