ಬಿಎಸ್ ವೈ, ಕಂದಾಯ ಸಚಿವರ 'ಲಾಂಗ್ ಟರ್ಮ್ ಗೆಸ್ಟ್' !

ಸೋಮವಾರ, 6 ಸೆಪ್ಟಂಬರ್ 2021 (11:04 IST)
ಬೆಂಗಳೂರು : ಮುಖ್ಯಮಂತ್ರಿ ಹುದ್ದೆ ತೊರೆದು ತಿಂಗಳು ಕಳೆದರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾವೇರಿ ವಾಸ್ತವ್ಯ ತೊರೆದಿಲ್ಲ.ಸರ್ಕಾರಿ ನಿವಾಸ ಕಾವೇರಿಯನ್ನು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಸದ್ಯಕ್ಕೆ ಯಡಿಯೂರಪ್ಪ ಅವರಿಗೆ ಕಾವೇರಿ ನಿವಾಸದಿಂದ ವಾಸ್ತವ್ಯ ಬದಲಾಯಿಸುವ ಮೂಡ್ ಇಲ್ಲವಂತೆ. 2023ರ ವಿಧಾನಸಭೆ ಚುನಾವಣೆವರೆಗೂ ಕಾವೇರಿಯಲ್ಲಿಯೇ ಬೀಡು ಬಿಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಹಂಚಿಕೆ ಮಾಡಿರುವ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಲಾಂಗ್ ಟರ್ಮ್ ಗೆಸ್ಟ್ ಆಗಿ ಉಳಿಯಲಿದ್ದಾರೆ. ಅಶೋಕ್ ಸದ್ಯ ತಮ್ಮ ಖಾಸಗಿ ನಿವಾಸದಲ್ಲಿ ಉಳಿದುಕೊಂಡಿದ್ದಾರೆ.
ಲಾಂಗ್ ಟರ್ಮ್ ಗೆಸ್ಟ್ ಸಂಸ್ಕೃತಿ ಕರ್ನಾಟಕ ರಾಜಕೀಯಕ್ಕೆ ಹೊಸತಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಾಗ ಸಿದ್ದರಾಮಯ್ಯ 2018 ರಲ್ಲಿ ಇದೇ ವಿಧಾನವನ್ನು ಮುಂದುವರಿಸಿದ್ದರು. ತಮಗೆ ಅಧಿಕಾರ ಇಲ್ಲದಿದ್ದರೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಕೆಜೆ ಜಾರ್ಜ್ ಅವರಿಗೆ ನೀಡಿದ್ದ ಕಾವೇರಿ ನಿವಾಸದಲ್ಲಿಯೇ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದರು.
ಸಮ್ಮಿಶ್ರ ಸರ್ಕಾರದ 14 ತಿಂಗಳ ಅವಧಿ ಪೂರ್ಣವಾಗುವವರೆಗೂ ಸಿದ್ದರಾಮಯ್ಯ ಕಾವೇರಿಯಲ್ಲಿಯೇ ಇದ್ದರು. 2019 ರಲ್ಲಿ ಮೈತ್ರಿ ಸರ್ಕಾರ ಪತನವಾದಾಗ ಶೇಷಾದ್ರಿಪುರಂ ನಲ್ಲಿರುವ ವಿರೋಧ ಪಕ್ಷದ ನಾಯಕರ ನಿವಾಸಕ್ಕೆ ತೆರಳಿದರು. ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಸ್ವಂತ ಮನೆ ಧವಳಗಿರಿಯಿಂದ 2020 ರಲ್ಲಿ ಕಾವೇರಿಯನ್ನು ರಿನೋವೇಷನ್ ಮಾಡಿಸಿ ಶಿಫ್ಟ್ ಆಗಿದ್ದರು, ಗುಂಡೂರಾವ್ ಕೂಡ ಅಧಿಕಾರ ಕಳೆದುಕೊಂಡ ಆರು ತಿಂಗಳ ನಂತರವೂ ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲಿ ವಾಸವಿದ್ದರು.
ರಾಮಕೃಷ್ಣ ಹೆಗ್ಡೆಯಂತ ಕೆಲವರು. ಮುಖ್ಯಮಂತ್ರಿಯಾದ ನಂತರವೂ ತಮ್ಮ ಸ್ವಂತ ನಿವಾಸದಿಂದ ಕಾರ್ಯ ನಿರ್ವಹಿಸಿದರು. ಯಡಿಯೂರಪ್ಪ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಬಸವರಾಜ ಬೊಮ್ಮಾಯಿ ನೀಡಿದ್ದರು ಆದರೆ, ಯಡಿಯೂರಪ್ಪ ಆಫರ್ ನಿರಾಕರಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ