ಮತ್ತೆ ರಾಹುಲ್ ಗಾಂಧಿ ಜಮ್ಮು ಪ್ರವಾಸ

ಸೋಮವಾರ, 6 ಸೆಪ್ಟಂಬರ್ 2021 (09:02 IST)
ನವದೆಹಲಿ (ಸೆ. 06): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಪ್ರವಾಸಕ್ಕೆ ಮುಂದಾಗಲಿದ್ದಾರೆ. ಇದೇ ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ಅವರು ಕಣಿವೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಈ ಭೇಟಿ ವೇಳೆ ಅವರು ಮಾತಾ ವೈಷ್ಣೋ ದೇವಿ ದೇವಾಲಯ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಅವರು ಭೇಟಿ ನೀಡುತ್ತಿರುವುದು ವಿಶೇಷ. ಕಣಿವೆ ರಾಜ್ಯದಲ್ಲಿ ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲಿ ಅವರು ಕೇಂದ್ರಾಡಳಿತ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಮಾನ್ಯತೆಯ 370ನೇ ವಿಧಿ ರದ್ದುಗೊಳಿಸಿದ ಬಳಿಕ ರಾಜಕೀಯ ಪ್ರವಾಸವನ್ನು ದೀರ್ಘಕಾಲ ನಿಷೇಧಿಸಿತ್ತು.
ಈಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎದುರಾಗುತ್ತಿದ್ದು, ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಹಿನ್ನಲೆ ಚುನಾವಣಾ ದೃಷ್ಟಿಯಿಂದ  ವಯನಾಡು ಸಂಸದ ರಾಹುಲ್ ಗಾಂಧಿ ಜಮ್ಮು ವಿಭಾಗದ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಅವರು ಇಲ್ಲಿನ ರಿಯಾಸಿ ಜಿಲ್ಲೆಯ ತ್ರಿಕೂಟ ಪರ್ವತದಲ್ಲಿರುವ ಮಾ ವೈಷ್ಣೋ ದೇವಿ ದರ್ಶನ ಪಡೆಯಲಿದ್ದಾರೆ.
ಅಷ್ಟೇ ಅಲ್ಲದೇ ಭೇಟಿ ವೇಳೆ ರಾಹುಲ್ ಗಾಂಧಿ ಬ್ಲಾಕ್, ಜಿಲ್ಲಾ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಎಐಸಿಸಿ ಉಸ್ತುವಾರಿ ರಜನಿ ಪಾಟೀಲ್ ಹೇಳಿದರು. ಜೊತೆಗೆ ಎರಡು ದಿನ ಜಮ್ಮುವಿನಲ್ಲಿ ವಾಸ್ತವ್ಯ ಹೂಡಲಿರುವ ಅವರು ಅನೇಕ ನಾಯಕರ ಭೇಟಿಯಾಗಲಿದ್ದಾರೆ. ಕಾಂಗ್ರೆಸ್ ಸಂಸದರು ಮಾಜಿ ಸಚಿವರು, ಶಾಸಕರು, ಎಐಸಿಸಿ ಸದಸ್ಯರು, ಪಿಸಿಸಿ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿನಿಧಿಗಳು ಸೇರಿದಂತೆ ವಿಸ್ತೃತ ಕಾರ್ಯ ಸಮಿತಿಯ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ
ಕಾಂಗ್ರೆಸ್ ನಾಯಕರ ಈ ಭೇಟಿ ಬಗ್ಗೆ ಈಗಾಗಲೇ ಸಲಹೆಗಳನ್ನು ಪಡೆಯಲಾಗಿದ್ದು ಪೂರ್ವ ಸಿದ್ಧತಾ ವ್ಯವಸ್ಥೆ ಕುರಿತು ಚರ್ಚಿಸಲಾಗಿದೆ. ಇನ್ನು ಈ ಭೇಟಿ ವೇಳೇ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಕೇಂದ್ರ ವಿಭಜಿಸಿದ ಕುರಿತು ರಾಜ್ಯದ ಸ್ಥಿತಿಗತಿ ಮತ್ತು ಜನರ ಪ್ರತಿಕ್ರಿಯೆಯನ್ನು ಅವರು ಪಡೆಯಲಿದ್ದಾರೆ ಎನ್ನಲಾಗಿದೆ.
ಕೋವಿಡ್ ಹಿನ್ನಲೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳು ಕೋವಿಡ್ ನಿಯಮಪಾಲಿಸಲಾಗುವುದು ಎಂದು ಪಕ್ಷದ ಕಚೇರಿ ತಿಳಿಸಿದೆ.
ಇನ್ನು ಆಗಸ್ಟ್ 9 ಮತ್ತು 10 ರಂದು ಕೂಡ ಜಮ್ಮು ಮತ್ತು ಕಾಶ್ಮೀರಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಈ ವೇಳೆ ಅವರು ತುಳಮಲ್ ಗಂದರ್ ಬಾಲ್ನಲ್ಲಿರುವ ಮಾತಾ ಖೀರ್ ಬವಾನಿ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ್ದು, ಮಾತಾ ದುರ್ಗಾದೇವಿ ದರ್ಶನ ಪಡೆದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ