ಪುಲ್ವಾಮಾ ದಾಳಿ ನಂತರ ಭಾರತವನ್ನ ಇಡೀ ಪ್ರಪಂಚದ ರಾಷ್ಟ್ರಗಳು ಬೆಂಬಲಿಸುತ್ತಿವೆ. ಭಯೋತ್ಪಾದಕತೆಯನ್ನು ಖಂಡಿಸುತ್ತಿವೆ. ಬೆನ್ನುಬಾಗಿಸುವ ಭಾರತ ಅಲ್ಲ. ಸೆಟೆದು ನಿಲ್ಲುವ ಭಾರತ ಆಗಿದೆ. ಇದಕ್ಕೆ ಮೋದಿ ಅವರೇ ಕಾರಣ. ಮೋದಿ ಅವರ ಪ್ರವಾಸದಿಂದ ಎಲ್ಲ ದೇಶಗಳು ನಮ್ಮ ಸಹಕಾರಕ್ಕೆ ನಿಂತಿವೆ. ಇದು ಮೋದಿ ಅವರ ರಾಜತಾಂತ್ರಿಕ ಗೆಲುವಾಗಿದೆ ಎಂದು ಬಿ.ಎಸ್.ವೈ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿ ಅವರ ನಾಯಕತ್ವ ದೇಶಕ್ಕೆ ಮಾತ್ರ ಅಲ್ಲ, ಇಡೀ ಪ್ರಪಂಚಕ್ಕೆ ಮಾದರಿ ಆಗಿದೆ. ಈ ಹಿಂದೆ ನಾಲ್ಕು ಅಂಶಗಳ ಬಗ್ಗೆ ಹೇಳಿ ನಾವು ನಿಮ್ಮಬಳಿ ಮತಗಳನ್ನು ಕೇಳಿದ್ವಿ. ಭ್ರಷ್ಟಾಚಾರ ಮುಕ್ತ ಸರ್ಕಾರ, ಅಭಿವೃದ್ಧಿಯಲ್ಲಿ ದಾಪುಗಾಲು, ದೇಶದ ಗಡಿಗಳ ರಕ್ಷಣೆ, ವಿದೇಶದಲ್ಲಿ ಭಾರತಕ್ಕೆ ಗೌರವ ಬರುವ ರೀತಿಯಲ್ಲಿ ನಡವಳಿಕೆ, ಉತ್ತಮ ಅಂತರಾಷ್ಟ್ರೀಯ ಸಂಬಂಧ. ಮಂತ್ರಿಮಂಡಲದ ಯಾವೊಬ್ಬ ಸದಸ್ಯರ ಮೇಲೆ ಆರೋಪ ಇಲ್ಲ. ಆ ರೀತಿಯ ಆಡಳಿತವನ್ನ ಮೋದಿ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಹಾಗಾಗೀಯೇ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಮೋದಿ ಅವರ ಆರ್ಥಿಕ ನೀತಿ ಪ್ರಪಂಚವನ್ನ ಬೆಚ್ಚಿ ಬೆರಗು ಮಾಡಿವೆ. ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ 5 ನೇ ಸ್ಥಾನಕ್ಕೆ ಬಂದಿದೆ. ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ 3 ಸ್ಥಾನಕ್ಕೆ ಬರುವ ನಿರೀಕ್ಷೆ ಇದೆ ಎಂದರು.