ಪಿಎಫ್‌ ನೂತನ ನೀತಿ ಜಾರಿಗೆ ವಿರೋಧ: ಹಿಂಸೆಯತ್ತ ತಿರುಗಿದ ಗಾರ್ಮೆಂಟ್ ನೌಕರರ ಪ್ರತಿಭಟನೆ

ಮಂಗಳವಾರ, 19 ಏಪ್ರಿಲ್ 2016 (18:02 IST)
ಕೇಂದ್ರ ಸರಕಾರದ ನೂತನ ಭವಿಷ್ಯ ನೀತಿ ವಿರೋಧಿಸಿ ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿದ್ದಲ್ಲದೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.
 
ಗಾರ್ಮೆಂಟ್ ಕಾರ್ಮಿಕರ ಪ್ರತಿಭಟನೆ ಎರಡನೆ ದಿನವೂ ಮುಂದುವರಿದಿದ್ದು, ಕೂಡಲೇ ಹೊಸ ನೀತಿಯನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಹಲವಾರು ಬಸ್‌ಗಳು ಜಖಂಗೊಂಡಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಹಿಂಸಾಚಾರದಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿಚಾರ್ಜ್ ಮತ್ತು ಅಶ್ರುವಾಯ ಶೆಲ್‌ಗಳನ್ನು ಸಿಡಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಬನ್ನೇರುಘಟ್ಟ ಮತ್ತು ಜಾಲಹಳ್ಳಿ ಕ್ರಾಸ್ ಬಳಿ ಉದ್ರಿಕ್ತ ವಾತಾವಾರಣ ಉಂಟಾಗಿದ್ದು, ಇದೀಗ ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ಕೂಡಾ ಉದ್ರಿಕ್ತ ವಾತಾವರಣವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಗಾರ್ಮೆಂಟ್ ನೌಕರರ ಪ್ರತಿಭಟನೆಯಿಂದ ನಗರದೊಳಗೆ ಪ್ರವೇಶಿಸುವ ಹೊಸೂರು ರೋಡ್, ತುಮಕೂರು ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
 
ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಮಾತನಾಡಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದಾಗ್ಯೂ ನಗರದ ಹೊರಗಿನ ಪ್ರದೇಶಗಳಲ್ಲಿ ಕೆಲ ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ