ಹಬ್ಬ ಹುಣ್ಣಿಮೆಗೆ ಬಟ್ಟೆ ಖರೀದಿಸಿದಂತೆ ಜ್ಞಾನ ವಿಸ್ತರಣೆಗೆ ಪುಸ್ತಕ ಖರೀದಿಸಿ ಎಂದ ಭೂಪತಿ
ಭಾನುವಾರ, 18 ನವೆಂಬರ್ 2018 (21:03 IST)
ಹಬ್ಬ-ಹುಣಿಮೆ, ಜಾತ್ರೆ-ಉತ್ಸವಕ್ಕೆ ಬಟ್ಟೆ ಮತ್ತೀತರ ವಸ್ತುಗಳನ್ನು ಖರೀದಿಸುವಂತೆ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಲು ಪುಸ್ತಕ ಖರೀದಿಸುವುದು ಅಗತ್ಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಹೇಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಬೆಳ್ಳಿ ಹಬ್ಬದ ಸಂಭ್ರಮದ ಪ್ರಯುಕ್ತ ಕಲಬುರಗಿ ನಗರದ ಸಾಹಿತಿ ಡಾ.ಕೆ.ಎಸ್.ಬಂಧು ಅವರ ಮನೆ ಅಂಗಳದಲ್ಲಿ “ನಿಮ್ಮ ಮನೆಗೆ ನಮ್ಮ ಪುಸ್ತಕ” ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ವಸುಂಧರ ಭೂಪತಿ, ಇತ್ತೀಚೆಗೆ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದ್ದು, ಮತ್ತೆ ಪುಸ್ತಕಗಳತ್ತ ಓದುಗರನ್ನು ಆಕರ್ಷಿಸಲು ಇದೀಗ ಪುಸ್ತಕಗಳನ್ನೆ ಓದುಗರ ಮನೆ ಬಾಗಿಲಿಗೆ ತಲುಪಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೀವು ಓದಿರಿ ಇತರರಿಗೆ ಓದಲು ಪ್ರರೇಪಿಸಿ ಎಂದರು.
ಪ್ರಾಧಿಕಾರವು ಹಿಂದೆ ಪುಸ್ತಕ ಖರೀದಿ ಮಾಡುತ್ತಿತ್ತು. ಇತ್ತೀಚಿಗೆ ಪುಸ್ತಕ ಪ್ರಕಟಣೆ, ಉಚಿತ ವಿತರಣೆ, ಯುವ ಬರಹಗಾರರಿಗೆ, ದಲಿತ ಲೇಖಕರಿಗೆ ಪ್ರೋತ್ಸಾಹ ಧನ, ಪ್ರಕಾಶಕರಿಗೆ ಪ್ರಶಸ್ತಿ ಸೇರಿದಂತೆ ಈ ವರ್ಷ ಉತ್ತಮ ಮುದ್ರಕರಿಗೆ ಪ್ರಶಸ್ತಿ ನೀಡುವ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ಎಂದು ವಿವರಿಸಿದರು.