ಅಕ್ಟೋಬರ್ 24ರಂದು “ನಿಮ್ಮ ಮನೆಗೆ ನಮ್ಮ ಪುಸ್ತಕ” ಕಾರ್ಯಕ್ರಮ

ಶನಿವಾರ, 20 ಅಕ್ಟೋಬರ್ 2018 (16:58 IST)
ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕಲಬುರಗಿ ಬ್ರಹ್ಮಪುರದ ಮಹಾಲಕ್ಷ್ಮೀನಗರದಲ್ಲಿರುವ ಡಾ. ಸ್ವಾಮಿರಾವ್ ಕುಲಕರ್ಣಿ ಅವರ ಮನೆಯಂಗಳದಲ್ಲಿ ಇದೇ ಅಕ್ಟೋಬರ್ 24 ರಂದು ಸಂಜೆ 5 ಗಂಟೆಗೆ “ನಿಮ್ಮ ಮನೆಗೆ ನಮ್ಮ ಪುಸ್ತಕ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 
 
ಖ್ಯಾತ ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಸ್ವಾಮಿರಾವ ಕುಲಕರ್ಣಿ ಅತಿಥಿಗಳಾಗಿ ಪಾಲ್ಗೊಳ್ಳುವರು.  ಖ್ಯಾತ ಚಿಂತಕರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ಎಸ್.ಟಿ. ಪೋತೆ,  ನಿವೃತ್ತ ಪ್ರಾಂಶುಪಾಲ ಹಾಗೂ ಖ್ಯಾತ ಅನುವಾದಕರಾದ ಬಾಲಚಂದ್ರ ಜಯಶಟ್ಟಿ ಉಪಸ್ಥಿತರಿರುವರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 
 
ಕನ್ನಡ ಪುಸ್ತಕ ಪ್ರಾಧಿಕಾರವು ಯುವಜನರಲ್ಲಿ ಸಾಹಿತ್ಯಾಭಿರುಚಿಯನ್ನು ಹುಟ್ಟಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಿದೆ. ಈ ದಿಸೆಯಲ್ಲಿ ಪ್ರಾಧಿಕಾರವು ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ “ನಿಮ್ಮ ಮನೆಗೆ ನಮ್ಮ ಪುಸ್ತಕ” ಕಾರ್ಯಕ್ರಮ ಯೋಜಿಸಿದೆ.

ಈ ಯೋಜನೆಯಡಿ ರಾಜ್ಯದ ವಿವಿಧ ನಗರದ ವಿವಿಧ ಬಡಾವಣೆಗಳಲ್ಲಿ ಜನನಿಬಿಡ ಪ್ರಾಂತ್ಯಗಳು ಹಾಗೂ ಸ್ಲಂಗಳಲ್ಲಿ ಆಯ್ದ ಮನೆಗಳ ಮನೆಯಂಗಳದಲ್ಲಿ ಕಾರ್ಯಕ್ರಮ  ಆಯೋಜಿಸಿ ಪುಸ್ತಕಗಳನ್ನು ಉಚಿತವಾಗಿ ನೀಡುವ ಮೂಲಕ ಪುಸ್ತಕಗಳ ಓದಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು  ತಿಳಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ