ಅನುಭವ ಮಂಟಪ ಮುಗಿಸಲು ನಿಮ್ಮ ಡಿ.ಕೆ.ಶಿವಕುಮಾರ್ ಬಿಡುತ್ತಾರಾ: ಬಿ.ವೈ.ವಿಜಯೇಂದ್ರ

Krishnaveni K

ಶುಕ್ರವಾರ, 18 ಏಪ್ರಿಲ್ 2025 (13:10 IST)
ಕಲಬುರ್ಗಿ: ಕರ್ನಾಟಕದ ಮುಖ್ಯಮಂತ್ರಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಅವರು ನಿನ್ನೆ ವಿಶೇಷ ಸಂಪುಟ ಸಭೆ ನಡೆದಿದೆ. ಮುಖ್ಯಮಂತ್ರಿಗಳ ಬಹಳ ಪ್ರೀತಿಯ ವಿಷಯವಾದ ಜಾತಿ ಗಣತಿ ಕುರಿತು ತೀರ್ಮಾನ ಮಾಡಲು ಇದನ್ನು ಕರೆದಿದ್ದರು. ಆದರೆ, ಇಚ್ಛಾಶಕ್ತಿ ಇಲ್ಲದ ಕಾರಣ ಯಾವುದೇ ನಿರ್ಧಾರಕ್ಕೆ ಬರಲಿಲ್ಲ ಎಂದು ತಿಳಿಸಿದರು. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪಂಗಡಗಳಿಗೆ ನ್ಯಾಯ ಕೊಡುವ ಇಚ್ಛಾಶಕ್ತಿ ಇದ್ದಿದ್ದೇ ಆದರೆ, ಎಸ್‍ಟಿ ಅಭಿವೃದ್ಧಿ ನಿಗಮದಲ್ಲಿ ಇಷ್ಟು ದೊಡ್ಡ ಹಗರಣಕ್ಕೆ ಅವಕಾಶ ಕೊಡುತ್ತಿರಲಿಲ್ಲ ಎಂದು ನುಡಿದರು.
 
ವಾಲ್ಮೀಕಿ ಅಭಿವೃದ್ಧಿ ನಿಗಮದ 150 ಕೋಟಿಯನ್ನು ಹೊರರಾಜ್ಯಕ್ಕೆ ಕಳುಹಿಸಿ ಹಗರಣ ನಡೆಯಲು ಮುಖ್ಯಮಂತ್ರಿಗಳು ಅವಕಾಶ ಕೊಡುತ್ತಿರಲಿಲ್ಲ. ದಲಿತರ ಅಭ್ಯುದಯಕ್ಕೆ ಮೀಸಲಿಟ್ಟ 38,500 ಕೋಟಿ ಅನುದಾನದ ದುರ್ಬಳಕೆಗೆ ಅವಕಾಶ ಆಗುತ್ತಿರಲಿಲ್ಲ ಎಂದು ತಿಳಿಸಿದರು.
 
ಬೆಂಕಿ ಹಚ್ಚುವ ಕೆಲಸ ಮಾಡಿದ್ದ ಮುಖ್ಯಮಂತ್ರಿ..
ತಮ್ಮ ಅಧಿಕಾರದ ಅವಧಿಯಲ್ಲಿ ಹೊಸ ಅನುಭವ ಮಂಟಪ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಸಿದ್ದರಾಮಯ್ಯನವರು 12ನೇ ಶತಮಾನದ ಅಣ್ಣ ಬಸವಣ್ಣನವರ ಕುರಿತು ಮಾತನಾಡುವ ಮೊದಲು ಸ್ವಲ್ಪ ಹಿಂದೆ ಮುಂದೆ ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ತಿಳಿಸಿದರು. ಅಣ್ಣ ಬಸವಣ್ಣನವರು ಸಮ ಸಮಾಜದ ಕನಸು ಕಂಡವರು. ಅದಕ್ಕಾಗಿ ಕೈಂಕರ್ಯ ತೊಟ್ಟು ನುಡಿದಂತೆ ನಡೆದವರು. ತಾವುಗಳು ವೀರಶೈವ -ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದೀರಿ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
 
ವೀರಶೈವ -ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಒಡೆಯಲು ಕೈ ಹಾಕಬಾರದಿತ್ತು ಎಂದು ಸ್ವತಃ ಡಿ.ಕೆ.ಶಿವಕುಮಾರ್ ಅವರು ಹೇಳಿ ಕ್ಷಮೆ ಕೇಳಿದ್ದರು. ಪಾಪ ಜನ ಮತ್ತೆ ಮತ ಕೊಟ್ಟರು. ಈಗ ಅಲ್ಪಸಂಖ್ಯಾತರಿಗೆ ಓಲೈಕೆ ಮಾಡುವ ದೃಷ್ಟಿಯಿಂದ ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳ ನಡೆಯನ್ನು ರಾಜ್ಯದ ಪ್ರತಿಯೊಂದು ಸಮುದಾಯವೂ ಗಮನಿಸುತ್ತಿದೆ. ಮುಖ್ಯಮಂತ್ರಿಗಳ ನಡೆ ಮತ್ತು ನುಡಿಗೆ ಅಜಗಜಾಂತರ ವ್ಯತ್ಯಾಸ ಇದೆ ಎಂದು ದೂರಿದರು. ಅನುಭವ ಮಂಟಪ ಮುಗಿಸಲು ನಿಮ್ಮ ಡಿ.ಕೆ.ಶಿವಕುಮಾರ್ ಬಿಡುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ರಾಜ್ಯದ ಮುಖ್ಯಮಂತ್ರಿಗಳ ಸ್ಥಾನದ ಗೌರವ ಕಳೆಯದಿರಿ ಎಂದು ತಿಳಿಸಿದರು. 
 
ಮೈಸೂರಿನಿಂದ ಹೊರಟ ಜನಾಕ್ರೋಶ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿರುವ ಕುರಿತು ಅವರು ಇದೇವೇಳೆ ಮಾಹಿತಿ ನೀಡಿದರು. ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂದು ಉತ್ತರಿಸಿದರು. ನಾಡಿನ ದೊರೆಯ ವರ್ತನೆ ಅಧಿಕಾರಿಗಳ ಮೇಲೂ ಆಗುತ್ತಿರುವಂತಿದೆ ಎಂದು ತಿಳಿಸಿದರು. ಇದು ಸರಿಯಲ್ಲ ಎಂದರು.
 
ಉಸ್ತುವಾರಿ ಸಚಿವರ ಮೂಗಿನ ಕೆಳಗೇ ಮರಳು ಮಾಫಿಯ..
ಚಿತ್ತಾಪುರ ಕ್ಷೇತ್ರಕ್ಕೆ ಹೋಗಿ ಬಂದಿದ್ದೇನೆ. ಕಾಗಿಣಾ ನದಿಯಲ್ಲಿ ಮರಳು ಮಾಫಿಯ ಜಿಲ್ಲಾ ಉಸ್ತುವಾರಿ ಸಚಿವರ ಮೂಗಿನ ಕೆಳಗೇ ನಡೆಯುತ್ತಿದೆ. ಒಂದೇ ನಂಬರ್ ಪ್ಲೇಟ್‍ನಲ್ಲಿ ನಾಲ್ಕೈದು ಟ್ರಕ್ ಓಡಾಡುತ್ತಿವೆ. ಕಾನೂನುಬಾಹಿರವಾಗಿ ಮಹಾರಾಷ್ಟ್ರ, ಅಕ್ಕಪಕ್ಕದ ರಾಜ್ಯಗಳಿಗೆ ಮರಳು ಮಾಫಿಯ ವಿಸ್ತರಣೆ ಆಗಿದೆ ಎಂದು ಬಿ.ವೈ.ವಿಜಯೇಂದ್ರ ಅವರು ವಿವರಿಸಿದರು.

ಉಸ್ತುವಾರಿ ಸಚಿವರಿಗೆ ಇದರ ಬಗ್ಗೆ ಗಮನಿಸಲು ಸಾಧ್ಯ ಆಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಅವರ ಮೂಗಿನ ಕೆಳಗೇ ಭ್ರಷ್ಟಾಚಾರ, ಸ್ಯಾಂಡ್ ಮಾಫಿಯ ನಡೆದಿದೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಸ್ವಂತ ಜಿಲ್ಲೆಯಲ್ಲಿ ಈ ರೀತಿ ಹಗಲು ದರೋಡೆಗೆ ಯಾಕೆ ಅವಕಾಶ ಕೊಟ್ಟಿದ್ದಾರೆ? ಅವರಿಗೇನು ಲಾಭ ಇದರಿಂದ? ಇದನ್ನು ಉತ್ತರಿಸಬೇಕೆಂದು ಆಗ್ರಹಿಸಿದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ