ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕರ ನಿಯೋಗವು ಇಂದು ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ವಿಷಯದಲ್ಲಿ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಲಾಗಿದ್ದು, ಸ್ಪೀಕರ್ ಅವರು ಇದಕ್ಕೆ ಬೆಂಬಲ ಕೊಡಬಾರದು ಎಂದು ಒತ್ತಾಯಿಸಿದರು.
ಈಚೆಗೆ ನಡೆದ ಸದನದ ಕಲಾಪದಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಕೂಡ ಆಗಿದೆ. ಹಲವಾರು ಬಾರಿ ವಿಪಕ್ಷದ ನಾಯಕರು ಮತ್ತು ಶಾಸಕರು ಸಭಾಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದರೂ ಶಾಸಕರ ಅಮಾನತನ್ನು ಹಿಂಪಡೆದಿಲ್ಲ ಎಂದರು. ಸ್ಪೀಕರ್ ಅವರು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದು, 18 ಶಾಸಕರ ಅಮಾನತು ತಮ್ಮೊಬ್ಬರ ತೀರ್ಮಾನ ಅಲ್ಲ ಎಂದಿದ್ದಾರೆ ಎಂದು ಗಮನ ಸೆಳೆದರು.