ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಷ್ಕರದಿಂದ ಬಸ್ ಸಿಗದೇ ಗ್ರಾಮೀಣ ಭಾಗದಲ್ಲಿ ಶಾಲಾ ಮಕ್ಕಳಿಗೆ ತೀವ್ರ ಸಮಸ್ಯೆ ಆಗಿದೆ. ಸರಕಾರಿ ಬಸ್ಸಿಲ್ಲದೆ ಕಾಲೇಜು, ಶಾಲಾ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಗಮನ ಸೆಳೆದರು. ಗ್ಯಾರಂಟಿ ಕಾರಣಕ್ಕಾಗಿ ಗ್ರಾಮೀಣ ಭಾಗದ ಬಸ್ ಓಡಾಟವನ್ನು ಕಡಿತಗೊಳಿಸಿದ್ದಾರೆ ಎಂದು ಅವರು ಆಕ್ಷೇಪಿಸಿದರು.
ಕೆಎಸ್‍ಆರ್‍ಟಿಸಿ ಮತ್ತಿತರ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ಕೊಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳ ತಿಂಗಳುಗಳಿಂದ ಆರ್ಥಿಕ ಮುಗ್ಗಟ್ಟು ಇದ್ದು, ಸಮಸ್ಯೆ ಉಲ್ಬಣವಾಗಿದೆ. ಹಾಗಾಗಿ ಅವರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ತಡ ಮಾಡದೇ, ತಕ್ಷಣವೇ ಕಾರ್ಮಿಕರ ಮತ್ತು ಅಧಿಕಾರಿಗಳ ಸಭೆ ಕರೆಯಬೇಕು. ಅವರ ಸಮಸ್ಯೆಗೆ ಪರಿಹಾರ ನೀಡಬೇಕು. ಜನಸಾಮಾನ್ಯರಿಗೆ ತೊಂದರೆ ಆಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು. ಇದು ಮುಖ್ಯಮಂತ್ರಿಗಳ ಕರ್ತವ್ಯ. ಸಾರಿಗೆ ಸಚಿವರೂ ಕುಳಿತು ಸಮಸ್ಯೆಗೆ ಪರಿಹಾರ ನೀಡಬೇಕೆಂದು ಆಗ್ರಹವನ್ನು ಮುಂದಿಟ್ಟರು. ರಾಹುಲ್ ಗಾಂಧಿಯವರ ಬೆಂಗಳೂರು ಭೇಟಿ ಕಾರಣಕ್ಕಾಗಿ ಮುಖ್ಯಮಂತ್ರಿಗಳು ನಿನ್ನೆ ಸಾರಿಗೆ ನೌಕರರ ಸಭೆ ಕರೆದಿದ್ದರು ಎಂದೂ ಅವರು ಆರೋಪಿಸಿದರು.