ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ, ಮಂಡ್ಯ, ಚಾಮರಾಜನಗರ ಕ್ಷೇತ್ರವನ್ನು ಒಳಗೊಂಡ ದೊಡ್ಡ ಚುನಾವಣಾ ಪ್ರಚಾರ ಸಭೆಯನ್ನು ಇದೇ 14ರಂದು ಸಂಜೆ 4 ಗಂಟೆಗೆ ಮೈಸೂರಿನ ಮಹಾರಾಜರ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ವಿವರಿಸಿದರು.
ವಿಶ್ವ ಮೆಚ್ಚಿದ ನಾಯಕ ಮೋದಿಯವರು ಸಾಂಸ್ಕøತಿಕ ನಗರಿ ಮೈಸೂರಿಗೆ ಬರುತ್ತಿದ್ದು, ಈ ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ದೊಡ್ಡ ಶಕ್ತಿ ತಂದುಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಮತ್ತು ಮಂಡ್ಯದ ಎನ್‍ಡಿಎ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ- ಜೆಡಿಎಸ್ ಹಿರಿಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರು ಹತಾಶರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ಸಿನವರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಚುನಾವಣೆಯಲ್ಲಿ 18- 20 ಸ್ಥಾನ ಗೆಲ್ಲುವ ಭ್ರಮೆಯಲ್ಲಿದ್ದ ಕಾಂಗ್ರೆಸ್ ಪಕ್ಷದವರಿಗೆ ಈಗ ಜ್ಞಾನೋದಯವಾಗಿ, ವಾಸ್ತವಿಕ ಪರಿಸ್ಥಿತಿ ಅರ್ಥವಾಗುತ್ತಿದೆ. ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ, ಒಂದಾಗಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುನ್ನುಗ್ಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹಲ್ಲೆಯಂಥ ಘಟನೆಗಳಿಂದ ನಮಗೆ ಹಿನ್ನಡೆ ಆಗುವುದಿಲ್ಲ ಎಂದು ತಿಳಿಸಿದರು.