ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯುವ ಉದ್ದೇಶದಿಂದ ಎಲ್ಲಾ ಪಕ್ಷಗಳೂ ಏನೇನೋ ಸರ್ಕಸ್ ಮಾಡುತ್ತಿವೆ. ಇದೀಗ ರಾಜ್ಯ ಬಿಜೆಪಿಯೂ ಯುವ ಜನರಿಗೆ ಇಷ್ಟವಾಗುವ ತಂತ್ರವನ್ನೇ ಬಳಸಲು ಮುಂದಾಗಿದೆ.
ರಾಜ್ಯ ಬಿಜೆಪಿ ಘಟಕ ಲೋಕಸಭೆ ಚುನಾವಣೆಗೆ ರೀಲ್ಸ್ ಮೊರೆ ಹೋಗಿದೆ. ಇತ್ತೀಚೆಗಿನ ದಿನಗಳಲ್ಲಿ ಯುವ ಜನಾಂಗ ರೀಲ್ಸ್ ಮಾಡುವುದರಲ್ಲಿ ಭಾರೀ ಆಸಕ್ತಿ ಹೊಂದಿದೆ. ಹೀಗಾಗಿ ಬಿಜೆಪಿ ಘಟಕ ಅದೇ ತಂತ್ರವನ್ನು ಬಳಸಿ ಮತದಾರರನ್ನು ಸೆಳೆಯಲು ಮುಂದಾಗಿದೆ.
ಇಂದು ಚುನಾವಣಾ ಪ್ರಚಾರಕ್ಕೆ ರೀಲ್ಸ್, ವಿಡಿಯೋ, ಅಡಿಯೋ ಹಾಡುಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬಿಜೆಪಿ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ನಿರ್ಮಿಸಿರುವ ವಿಡಿಯೋ, ಆಡಿಯೋ ಹಾಡುಗಳು ಮತ್ತು ರೀಲ್‍ಗಳನ್ನು ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬಿಡುಗಡೆ' ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಯ ರಾಜ್ಯ ಸಂಚಾಲಕ ವಿ. ಸುನೀಲ್ ಕುಮಾರ್, ಶಾಸಕ ಎಸ್. ರಘು, ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕ ಅವಿನಾಶ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪ್ರಮುಖರು ಉಪಸ್ಥಿತರಿದ್ದರು.