ಮದ್ದೂರಿನಲ್ಲಿ ಗಣೇಶ ಗಲಾಟೆ: ಹಿಂದೂಗಳ ಮೇಲೆಯೇ ಯಾಕೀ ದಾಳಿ ಬಿವೈ ವಿಜಯೇಂದ್ರ ಆಕ್ರೋಶ

Krishnaveni K

ಸೋಮವಾರ, 8 ಸೆಪ್ಟಂಬರ್ 2025 (11:21 IST)
ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ  ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಗಳಿಗೇ ಯಾಕೆ ಹೀಗೆ ಎಂದು ಪ್ರಶ್ನೆ ಮಾಡಿದ್ದಾರೆ.

‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಹಬ್ಬಗಳು, ಗಣಪತಿ ಉತ್ಸವ ಹಾಗೂ ಮೆರವಣಿಗೆಗಳನ್ನು ನೆಮ್ಮದಿಯಾಗಿ ಆಚರಿಸಲಾಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಗಣೇಶ ವಿಸರ್ಜನೆಯ ಮೆರವಣಿಗೆಯ ಸಂದರ್ಭದಲ್ಲಂತೂ ಮತಾಂಧ ಪುಂಡರು ಗುಂಪು ಕಟ್ಟಿಕೊಂಡು ಕಲ್ಲು ತೂರುವ ಘಟನೆಗಳು ಮಂಡ್ಯ, ಧಾರವಾಡ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ವರದಿಯಾಗುತ್ತಿವೆ.

ನಿನ್ನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳು ಮೆರವಣಿಗೆ ವೇಳೆ ನಿರಂತರ ಕಲ್ಲು ತೂರಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಿದ್ದಾರೆ, ಕಲ್ಲು ತೂರಾಟದಲ್ಲಿ ಮಹಿಳೆಯರು ಹಾಗೂ ಪೊಲೀಸರು ತೀವ್ರವಾಗಿ ಗಾಯಗೊಂಡಿರುವ ಘಟನೆ ಅತ್ಯಂತ ಆತಂಕಕಾರಿಯಾಗಿದ್ದು ಬಿಜೆಪಿ ಇದನ್ನು ಅತ್ಯುಗ್ರವಾಗಿ ಖಂಡಿಸುತ್ತದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿಯೂ ಗಣಪತಿ ಮೂರ್ತಿಯನ್ನು ಮಲಿನಗೊಳಿಸಿರುವ ಸುದ್ದಿಯೂ ವರದಿಯಾಗಿದೆ, ಅಲ್ಪಸಂಖ್ಯಾತರ ಹೆಸರಿನ ಪುಂಡರ ಈ ಪರಿಯ ಅಟ್ಟಹಾಸ ಹಿಂದೂ ಧರ್ಮಿಯರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಭಯಗ್ರಸ್ತ ವಾತಾವರಣವನ್ನುಂಟುಮಾಡಿದೆ.

ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದೆ. ಪೊಲೀಸ್ ಠಾಣೆಗಳು ಹಾಗೂ ಪೊಲೀಸರ ಮೇಲೆ ದಾಳಿ ನಡೆದರೂ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗದ ಪರಿಸ್ಥಿತಿಯನ್ನು ನೋಡುತ್ತಿದ್ದರೆ ರಾಜ್ಯದಲ್ಲಿ 'ಮೊಘಲ್ ಪ್ರೇರಣೆಯ' ಆಡಳಿತ ನಡೆಯುತ್ತಿರುವಂತೆ ಭಾಸವಾಗುತ್ತಿದೆ.  ಸರ್ಕಾರದ ಈ ಪಕ್ಷಪಾತ ಹಾಗೂ ಮೃದು ಧೋರಣೆ ರಾಜ್ಯದಲ್ಲಿ ಅರಾಜಕತೆ ಉಂಟಾಗಲು ಕಾರಣವಾಗುತ್ತಿದೆ. ಮದ್ದೂರಿನ ಹಾಗೂ ಸಾಗರದ ಘಟನೆಯ ಕುರಿತು ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳದಿದ್ದರೆ, ಮತಾಂಧ ದುಷ್ಕರ್ಮಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸದಿದ್ದರೆ ರಾಜ್ಯದ ಜನರೇ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ