ರೈತನ ಮೇಲೆ ಕೂಗಾಡಿದ ಮಲ್ಲಿಕಾರ್ಜುನ ಖರ್ಗೆ ವರ್ತನೆ ಏನೂ ಅಚ್ಚರಿಯಿಲ್ಲ ಬಿಡಿ ಎಂದ ಅಶೋಕ್

Krishnaveni K

ಸೋಮವಾರ, 8 ಸೆಪ್ಟಂಬರ್ 2025 (10:25 IST)
ಬೆಂಗಳೂರು: ರೈತನ ಮೇಲೆ ಕೂಗಾಡಿದ ಮಲ್ಲಿಕಾರ್ಜುನ ಖರ್ಗೆ ವರ್ತನೆ ಅಚ್ಚರಿಯೇನಲ್ಲ. ರೈತನ ಮೇಲೆ ಕೂಗಾಡಿದ ಕಾಂಗ್ರೆಸ್ ನಾಯಕರ ಲಿಸ್ಟೇ ಇದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರದ ಮದದಿಂದ ಕಾಂಗ್ರೆಸ್ ನಾಯಕರು ರೈತರ ಮೇಲೆ ದಬ್ಬಾಳಿಕೆ ಮಾಡಿರುವುದು, ಅನ್ನದಾತರಿಗೆ ಅಪಮಾನ ಮಾಡಿರುವುದು ಇದೇನು ಮೊದಲಲ್ಲ. ಆ ಪಟ್ಟಿ ಬಹಳ ದೊಡ್ಡದಿದೆ. ಆದರೆ ಹಿರಿಯರು, ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಈಗ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಕನ್ನಡ ನಾಡಿನ ಕೃಷಿಕರ ದುರಂತ ಎಂದು ಆರ್ ಅಶೋಕ್  ಹೇಳಿದ್ದಾರೆ.

ತೊಗರಿ ಬೇಳೆ ಹಾಳಾಗಿ ನಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳಲು ಬಂದ ನೊಂದ ರೈತರ ಬಳಿ ಈ ರೀತಿ ವ್ಯವಹರಿಸುವುದು ಸರೀನಾ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರೇ? ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.

"ನಿನ್ನದು 4 ಎಕ್ರೆ ಹಾಳಾಗಿದೆ. ನನ್ನದು 40 ಎಕ್ರೆ ಹಾಳಾಗಿದೆ. ಪ್ರಚಾರಕ್ಕಾಗಿ ತೊಗರಿ ತೆಗೆದುಕೊಂಡು ಬಂದ್ದಿದ್ದೀಯಾ? ತೊಗರಿ ಅಷ್ಟೆ ಅಲ್ಲ, ಉದ್ದು, ಹೆಸರು ಕೂಡ ಹಾಳಾಗಿದ್ದು ನನಗೆ ಗೊತ್ತಿದೆ. 6 ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಯಿತು" ಎಂದು ಗದರಿ ಕಳಿಸಿದ್ದೀರಲ್ಲ ಇದೇನಾ ಕಾಂಗ್ರೆಸ್ ಪಕ್ಷ ರೈತರಿಗೆ ಕೊಡುವ ಗೌರವ?

ಸಿಎಂ ಸಿದ್ದರಾಮಯ್ಯ ಅವರು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ಕಳಸಾ-ಬಂಡೂರಿ ಅನುಷ್ಠಾನಕ್ಕೆ ಕರ್ನಾಟಕದ ರೈತರು ಪ್ರತಿಭಟನೆ ಮಾಡಿದ್ದಾಗ ತಮ್ಮ ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಹಳ್ಳಿ ಹಳ್ಳಿಗೆ ಕಳಿಸಿ ರೈತರ ಮೇಲೆ ಲಾಠಿ ಬೀಸಿದ್ದನ್ನು ನಾಡಿನ ರೈತರು ಮರೆತಿಲ್ಲ.

ಬೆಳಗಾವಿಯಲ್ಲಿ ವಿಠಲ್ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಾಗ, ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದನ್ನ ನಾಡಿನ ರೈತರು ಮರೆತಿಲ್ಲ.

"ಸಾಲ ಮನ್ನಾ ಆಸೆಗಾಗಿ ರೈತರು ಬರಗಾಲ ಬರಲಿ ಎಂದು ಆಶಿಸುತ್ತಾರೆ" ಎಂದು ಸಚಿವ ಶಿವಾನಂದ ಪಾಟೀಲರು ರೈತರಿಗೆ ಅಪಮಾನ ಮಾಡಿದ್ದನ್ನೂ ರೈತರು ಮರೆತಿಲ್ಲ

ರೈತರ ಸರಣಿ ಆತ್ಮಹತ್ಯೆ ವಿಷಯ ಬಂದಾಗ "ಎಲ್ಲಿದೆ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರು ಅನ್ನೋಕಾಗತ್ತಾ? ಸುಳ್ಳು ಅದೆಲ್ಲಾ." ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ರೈತರ ಬಗ್ಗೆ ತುಚ್ಛವಾಗಿ ಮಾತನಾಡಿದ್ದನ್ನು ಮರೆತಿಲ್ಲ.

"ರೈತರು ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕ್ಕಾಗಲ್ಲ" ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಅನ್ನದಾತರನ್ನು ಹೀಯಾಳಿಸಿ ಮಾತನಾಡಿದ್ದನ್ನು ಮರೆತಿಲ್ಲ. ರೈತ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ನಾಡಿನ ಅನ್ನದಾತರ ಶಾಪ ತಟ್ಟದೇ ಇರದು’ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ