ಸುಳ್ಳು, ವಂಚನೆ ಮಾಡೋದೇ ಕಾಂಗ್ರೆಸ್ ಸರ್ಕಾರದ ಕೆಲಸ: ಛಲವಾದಿ ನಾರಾಯಣಸ್ವಾಮಿ

Krishnaveni K

ಬುಧವಾರ, 23 ಜುಲೈ 2025 (18:03 IST)
ಬೆಂಗಳೂರು: ಕಾಂಗ್ರೆಸ್ ಪಕ್ಷದ ಈ ಸರ್ಕಾರ ‘ಸುಮೋವಂ’ ಸರ್ಕಾರವಾಗಿದೆ. ಅಂದರೆ ಸುಳ್ಳು–ಮೋಸ-ವಂಚನೆಗೆ ದೊಡ್ಡ ಹೆಸರಾಗಿರುವ ಸುಮೋವಂ ಸರ್ಕಾರ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಸುಳ್ಳು ಹೇಳುವುದು ಹರಿದುಬಂದ ವಿಚಾರ, ಮೋಸ ಮಾಡುವುದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಕಾಂಗ್ರೆಸ್ ಹುಟ್ಟಿದ ದಿನದಿಂದ ಮೋಸ ಜೊತೆಯಲ್ಲಿ ಬಂದಿದೆ. ಪ್ರತಿದಿನ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
 
ಬಡವರ ಹೊಟ್ಟೆಯ ಮೇಲೆ ಬರೆ ಹಾಕಿ ಈ ಕಾಂಗ್ರೆಸ್ ಸರ್ಕಾರ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡಿದೆ. ಸರ್ಕಾರದ ಖಜಾನೆ ಬರಿದಾಗಿದೆ. ಖಜಾನೆ ತುಂಬಿಸಿಕೊಳ್ಳಲು ಬಡವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕೇಂದ್ರದ ಒತ್ತಡ ಮತ್ತು ಯೋಚನೆ ಇಲ್ಲದಿದ್ದರೂ ಈ ರೀತಿ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿ ಯುಪಿಐ ಯೋಜನೆಗೆ ಕಳಂಕ ತರುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
 
ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್ ಜಾರಿ ಮಾಡಿರುವುದು ರಾಜ್ಯ ಸರ್ಕಾರದ ಸ್ವಯಂಕೃತ ಅಪರಾಧ. ನಾನು ಕೆಲ ಅಧಿಕಾರಿಗಳನ್ನು ವಿಚಾರಿಸಿದಾಗ ನೀವು ಮಾಡುವ ಕೆಲಸವನ್ನು ಮಾಡಿ ನಮಗೆ ಟಾರ್ಗೆಟ್ ಇದೆ. ನಾವು ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಬೇಕು ಈ ಕಾರಣದಿಂದ ಮಾಡಿ. ಇದರಲ್ಲಿ ಕೇಂದ್ರ ಸರ್ಕಾರ ಶೇ.50 ರಷ್ಟು ತೆಗೆದುಕೊಳ್ಳುತ್ತದೆ. ಆದ್ದರಿಂದ ನೀವು ತೆರಿಗೆ ಸಂಗ್ರಹಣೆ ಮಾಡಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
 
ಕೇಂದ್ರ ಸರ್ಕಾರ ಯಾವ ಆದೇಶವನ್ನು ನೀಡಿಲ್ಲ. ಜಿಎಸ್‍ಟಿ ಕಾಯ್ದೆಯಲ್ಲಿ ವಾರ್ಷಿಕ ವಹಿವಾಟಿನ ಮೇಲೆ ಶೇ 1 ರಷ್ಟು ತೆರಿಗೆ ವಿಧಿಸಬೇಕೆಂದು ಇದೆ. ಆದರೆ ಇಂದು ಜಿಎಸ್‍ಟಿಯನ್ನು ದೊಡ್ಡಮಟ್ಟದಲ್ಲಿ ಕೇಂದ್ರ ಸರ್ಕಾರಕ್ಕೆ ಅಪವಾದ ತಂದುಕೊಡಬೇಕೆಂದು ರಾಜ್ಯದ ಸಣ್ಣಪುಟ್ಟ ವರ್ತಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಆರೋಪಿಸಿದರು. 
 
ಬೀದಿಬದಿ ವ್ಯಾಪಾರ ಮಾಡುವವರಿಗೆ ಜಿಎಸ್‍ಟಿ ಯಾವ ರೀತಿ ಬರಬಹುದು, ಯಾವ ಹಣಕ್ಕೆ ಬರುತ್ತದೆ, ತೆರಿಗೆ ವಸ್ತುಗಳ ಯಾವುದು, ತೆರಿಗೆ ಇಲ್ಲದ ವಸ್ತುಗಳ ಯಾವುದು ಎಂದು ಅವರಿಗೆ ಅರಿವು ಮೂಡಿಸುವ ಕೆಲಸ ಸರ್ಕಾರ ಮಾಡಲಿಲ್ಲ. ಇಂದು ಟೀ, ಕಾಫಿ ಮಾರಾಟ ಮಾಡುವವರಿಗೂ ತೆರಿಗೆ ಕಟ್ಟಬೇಕು ಎಂದು ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
 
ಕೇಂದ್ರ ಸರ್ಕಾರಕ್ಕೆ ಅಪವಾದ ತರುವುದೇ ಇವರ ಮೂಲ ಉದ್ದೇಶವಾಗಿದೆ ಎಂದು ದೂರಿದರು. ನಾವು ತೆರಿಗೆ ಸಂಗ್ರಹಿಸಿದರೆ ನಿಮಗೆ ಏನು ತೊಂದರೆ. ಇದು ಕೇಂದ್ರ ಸರ್ಕಾರದ ಆದೇಶ ಎಂದು ಹೇಳುತ್ತಿದ್ದಾರೆ. ಕಾಯ್ದೆಯಲ್ಲಿ ಇದೆ; ಆದರೆ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸುವುದು ಎಲ್ಲಿಯೂ ಜಾರಿಯಾಗಿಲ್ಲ ಎಂದು ತಿಳಿಸಿದರು.
 
ಕೇಂದ್ರ ಸರ್ಕಾರ ಶೇ 50 ರಷ್ಟು ತೆರಿಗೆಯನ್ನು ತೆಗೆದುಕೊಳ್ಳುತ್ತದೆ. ಆದರೆ ನಿಮ್ಮನ್ನು ಸಣ್ಣ ವ್ಯಾಪಾರಿಗಳಿಂದ ತೆರಿಗೆ ಸಂಗ್ರಹಿಸುವಂತೆ ಹೇಳಿದವರು ಯಾರು ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಆದೇಶ ಮಾಡಿರುವುದಿಲ್ಲ. ಸಣ್ಣ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮಾರಿದರು ತೆರಿಗೆಯನ್ನು ಕಟ್ಟಲು ಆಗದಷ್ಟು ತೆರಿಗೆಯನ್ನು ವಿಧಿಸಿದ್ದಾರೆ ಎಂದು ವಿವರಿಸಿದರು. ಸಣ್ಣ ವ್ಯಾಪಾರಿಗಳ ಹೋರಾಟಕ್ಕೆ ಬಿಜೆಪಿ ಪಕ್ಷದ ಸಂಪೂರ್ಣ ಬೆಂಬಲವಿದ್ದು, ಜುಲೈ 25 ರಂದು ಸಂಘಟನೆಗಳು ಮಾಡುವ ಹೋರಾಟಕ್ಕೆ ನಾವು ಕೂಡ ಬೆಂಬಲ ನೀಡಲಿದ್ದೇವೆ ಎಂದು ತಿಳಿಸಿದರು.
 
ನೆಪ ಮಾತ್ರಕ್ಕೆ ಅಧಿವೇಶನ
ಕರ್ನಾಟಕ ವಿಧಾನಸಭಾ ಮತ್ತು ವಿಧಾನಪರಿಷತ್ ಅಧಿವೇಶನ ಆಗಸ್ಟ್ 11 ರಿಂದ ಪ್ರಾರಂಭವಾಗಲಿದೆ. ಇದು ಕೇವಲ ಅಧಿವೇಶನವನ್ನು ಮಾಡಲಿಲ್ಲ ಅನ್ನಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಕೇವಲ 9 ದಿನಕ್ಕೆ ಮಾತ್ರ ಅಧಿವೇಶನವನ್ನು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
 
ಮೊದಲನೆ ದಿನದ ಅಧಿವೇಶನ ಲೆಕ್ಕಕ್ಕೆ ಇಲ್ಲ. ಅಂದರೆ ಕೇವಲ 8 ದಿನ ಮಾತ್ರ ಅಧಿವೇಶನ ಕರೆದಿದ್ದಾರೆ. ಈ ಸರ್ಕಾರ ಮಾಡಿರುವ ತಪ್ಪುಗಳಿಂದ ನುಣುಚಿಕೊಳ್ಳಲು ವಿರೋಧಪಕ್ಷಗಳಿಗೆ ಅಸ್ತ್ರ ಕೊಡಬಾರದು; ಅವರಿಗೆ ಪ್ರಶ್ನಿಸಲು ಅವಕಾಶವನ್ನು ಕೊಡಬಾರದು; ಸರ್ಕಾರದ ತಪ್ಪುಗಳನ್ನು ಬಯಲು ಮಾಡುವುದಕ್ಕೆ ಅವಕಾಶಗಳನ್ನು ಕೊಡಬಾರದು ಎನ್ನುವ ಕಾರಣಕ್ಕೆ ಮತ್ತು ಕೆಲವು ಬಿಲ್ಲುಗಳನ್ನು ಅನುಮೋದಿಸಿಕೊಳ್ಳುವುದಕ್ಕೆ ಅಧಿವೇಶನ ಕರೆದಂತೆ ಇದೆ ಎಂದು ಆರೋಪಿಸಿದರು.
 
ಆರ್‍ಸಿಬಿ ಕಾಲ್ತುಳಿತದಲ್ಲಿ ಆದಂತಹ ಅನಾಹುತ ಕಪ್ಪು ಆರ್‍ಸಿಬಿಯದ್ದು, ತಪ್ಪು ಸರ್ಕಾರದ್ದು ಎಂಬಂತಾಗಿದೆ. ರಾಜ್ಯದ ಮುಖ್ಯಮಂತ್ರಿಗಳ ಮತ್ತು ಉಪ ಮುಖ್ಯಮಂತ್ರಿಗಳ ಚೆಲ್ಲಾಟದಲ್ಲಿ 11 ಜನರ ಬಲಿಯಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಏನೆಲ್ಲ ಆಟವನ್ನು ಆಡಿದ್ದಾರೆ ಎಂಬುದನ್ನು ರಾಜ್ಯದ ಜನರ ಮುಂದೆ ನಾವು ಇಡಬೇಕಾಗಿದೆ ಎಂದು ತಿಳಿಸಿದರು.
 
ಬಾಣಂತಿರ ಸಾವು, ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ, ಜನೌಷಧಿ ಕೇಂದ್ರಗಳನ್ನು ಮುಚ್ಚುವುದು, ಕೋವಿಡ್ ಲಸಿಕೆಯಿಂದ ಜನ ಮರಣವನ್ನು ಹೊಂದುತ್ತಿದ್ದಾರೆ ಎಂದು ತಪ್ಪು ಕಲ್ಪನೆಗಳನ್ನು ಸೃಷ್ಟಿ ಮಾಡಿರುವುದು ಇನ್ನು ಹಲವಾರು ವಿಚಾರಗಳನ್ನು ಸದನದಲ್ಲಿ ಚರ್ಚಿಸುವ ವಿಷಯವು ಇದೆ ಎಂದು ತಿಳಿಸಿದರು.
 
ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ರಾಜ್ಯದಲ್ಲಿ ಹದಗೆಟ್ಟಿದೆ ಅದರ ಬಗ್ಗೆ ಪ್ರಸ್ತಾಪವಿಲ್ಲ. ಕಾಂಗ್ರೆಸ್ ಸರ್ಕಾರ ಮಾಡಿದ ಭ್ರಷ್ಟಾಚಾರಗಳು, ಅನಾಹುತಗಳಿಗೆ ಕ್ಲೀನ್ ಚಿಟ್ ಕೊಡುವುದಕ್ಕೆ ಮಾತ್ರ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಬಳಕೆ ಮಾಡುತ್ತಿದ್ದಾರೆ. ಕಾರ್ಮಿಕ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಬಹಳಷ್ಟು ಭ್ರಷ್ಟಾಚಾರವಾಗಿರುವ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ ಎಂದು ತಿಳಿಸಿದರು. 
ದಲಿತ ವಿರೋಧಿ ನೀತಿಗಳು, ಕಮ್ಯುನಿಸ್ಟರ ಜೊತೆ ಸರ್ಕಾರ ಸೇರಿಕೊಂಡು ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುವ ಕೆಲಸಕ್ಕೆ, ಸರ್ಕಾರಕ್ಕೆ ಪೊಲೀಸ್ ಇಲಾಖೆಯ ಮೇಲೆ  ನಂಬಿಕೆ ಇಲ್ಲ. ಕೇರಳ ಪೊಲೀಸ್ ಕರೆತಂದು ತನಿಖೆ ನಡೆಸುವಂತೆ ಕಮ್ಯುನಿಸ್ಟರು ಬಂದು ಮನವಿ ಕೊಡುತ್ತಿದ್ದಾರೆ. ಇಂತಹ ಎಲ್ಲ ಅನಾಹುತಗಳಿಗೆ ನಾವು ಉತ್ತರ ಕೊಡಬೇಕಾಗಿದೆ. ಇವೆಲ್ಲವನ್ನು ಸದನದಲ್ಲಿ ನಾವು ಯಾವ ರೀತಿ ವ್ಯವಸ್ಥಿತವಾಗಿ ಹೋರಾಟ ಮಾಡಬೇಕು ಎಂದು ವಿಧಾನ ಪರಿಷತ್ತಿನಲ್ಲಿರುವ ಬಿಜೆಪಿಯ 29 ಪರಿಷತ್ ಸದಸ್ಯರ ಮತ್ತು ಜೆಡಿಎಸ್‍ನ 6 ಸದಸ್ಯರು ಒಟ್ಟಿಗೆ 35 ಜನ ಹೋರಾಟವನ್ನು ಮಾಡಲು ಪಕ್ಷದ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಸಿ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ ಎಂದು ವಿವರಿಸಿದರು.
 
ಸುಪ್ರೀಂ ಕೋರ್ಟ್ ನಿರಪರಾಧಿ ಎಂದು ಕ್ಲೀನ್ ಚಿಟ್ ನೀಡಿಲ್ಲ
ಇ.ಡಿ ಯವರು ಬೇಕೆಂದು ಮುಖ್ಯಮಂತ್ರಿಗಳನ್ನು ಸಿಕ್ಕಿಹಾಕಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ರಾಜಕೀಯ ಆಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ. ಆ ವಾದವನ್ನು ಸುಪ್ರಿಂ ಕೋರ್ಟ್ ಎತ್ತಿಹಿಡಿದರಬಹುದು. ಅದನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ ನಿಮಗೆ ಕ್ಲೀನ್ ಚಿಟ್ ಕೊಟ್ಟು ನಿರಪರಾಧಿ ಎಂದು ಹೇಳಿದ್ದರೆ ನೀವು ವಿಜ್ರಂಭಿಸಬಹುದಾಗಿತ್ತು. ಸುಪ್ರಿಂ ಕೋರ್ಟ್ ನಿರಪರಾಧಿ ಎಂದು ಕ್ಲೀನ್ ಚಿಟ್ ನೀಡಿಲ್ಲ. ಆದರೆ ಈಗಲೂ ನೀವು ನಮ್ಮ ಪ್ರಕಾರ ಅಪರಾಧಿಯೇ; ಕಳ್ಳರೇ; ಖದೀಮರೇ. ಇದರಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಇಂದಲ್ಲಾ ನಾಳೆ ನೀವು ಸಿಕ್ಕಿ ಬೀಳುತ್ತೀರ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಟೀಕಿಸಿದರು.

ನಾವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ ವಿರೋಧಿಸವುದಿಲ್ಲ. ಆದರೆ ಸಿದ್ದರಾಮಯ್ಯ ನವರು ನಿರಪರಾಧಿ ಮುಡಾದಲ್ಲಿ ಯಾವುದೇ ನಿವೇಶನ ಪಡೆದಿಲ್ಲ; ಯಾವುದೇ ಭ್ರಷ್ಟಾಚಾರ ಮೂಡಾದಲ್ಲಿ ನಡೆದಿಲ್ಲ ಆದರೂ ರಾಜ್ಯ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಸಲು ಕೇಂದ್ರ ಸರ್ಕಾರವಾಗಲೀ, ಇ.ಡಿಯಾಗಲೀ, ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಆದೇಶ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು. 

ಮುಡಾ ಪ್ರಕರಣದಲ್ಲಿ ಇ.ಡಿ ಎಷ್ಟು ಸಾವಿರ ಕೋಟಿ ಆಸ್ತಿಯನ್ನು ಬಿಡಿಸಿಕೊಟ್ಟಿದೆ ಎಂಬುದನ್ನು ಮೊದಲು ಹೇಳಿ ಎಂದು ಕೇಳಿದರು. 14 ನಿವೇಶನಗಳನ್ನು ಯಾರು ವಾಪಸ್ಸು ನೀಡಿದರು; ದಲಿತರ ಜಮೀನು ಕಸಿದುಕೊಂಡವರು ಯಾರು; ಮುಡಾಗೆ ಹೋದ ಜಮೀನು ಮುಖ್ಯಮಂತ್ರಿಗಳ ಮನೆತನಕ್ಕೆ ಬರುವುದಕ್ಕೆ ಕಾರಣವೇನು? ಇದಕ್ಕೆಲ್ಲ ಉತ್ತರ ಕೊಡಬೇಕು ಅಲ್ಲವೇ ಎಂದು ಕೇಳಿದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ