ಬಾಳೆಹೊನ್ನೂರಿನಲ್ಲಿ ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಕಾಂಗ್ರೆಸ್ ಸರಕಾರವು ಅಧಿಕಾರ ವಹಿಸಿಕೊಂಡು 20 ತಿಂಗಳಾಗಿದೆ. ರಸ್ತೆಗಳು, ಆಸ್ಪತ್ರೆಗಳು, ಶಾಲಾ ಕೊಠಡಿಗಳನ್ನೂ ಕೊಡದ ಕೆಟ್ಟ ಪರಿಸ್ಥಿತಿಗೆ ಬಂದು ನಿಂತಿದೆ ಎಂದು ಆಕ್ಷೇಪಿಸಿದರು.
ರನ್ಯಾರಾವ್ ಚಿನ್ನ ಸ್ಮಗ್ಲಿಂಗ್ ಹಿಂದೆ ಕೆಲವು ಸಚಿವರು ಇರುವ ಮಾಹಿತಿ ಬಗೆಗಿನ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಹಳ ಪ್ರಮುಖ ಪತ್ರಿಕೆಗಳಲ್ಲೂ ಈ ವಿಷಯ ಪ್ರಕಟಗೊಂಡಿದೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಇಂಥ ಗಂಭೀರ ಪ್ರಕರಣವು ಯಾರದೋ ಬೆಂಬಲ ಇಲ್ಲದೆ ಆಗಲು ಸಾಧ್ಯ ಇಲ್ಲ ಎಂದು ತಿಳಿಸಿದರು.
ವಿಜಯೇಂದ್ರ ಬಗ್ಗೆ ಸಾಕಷ್ಟು ನಿರೀಕ್ಷೆ, ಅಪೇಕ್ಷೆ..
ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಎಲ್ಲ ಸಂದರ್ಭದಲ್ಲೂ ಯಡಿಯೂರಪ್ಪ ಅವರ ಪರವಾಗಿ ಧ್ವನಿ ಎತ್ತಿದವರು. ಈ ಪುಣ್ಯಕ್ಷೇತ್ರದ ಕಾರ್ಯಕ್ರಮ ನಿಮಿತ್ತ ಬಂದಿದ್ದೇನೆ ಎಂದ ಅವರು, ಜಗದ್ಗುರುಗಳಿಗೆ ವಿಜಯೇಂದ್ರ ಬಗ್ಗೆ ಸಾಕಷ್ಟು ನಿರೀಕ್ಷೆ, ಅಪೇಕ್ಷೆ ಇದೆ. ವಿಜಯೇಂದ್ರ ಅವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕೆಂಬ ಸಂದೇಶವನ್ನು ಜಗದ್ಗುರುಗಳು ನೀಡಿದ್ದಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಜಗದ್ಗುರುಗಳ ಆಶೀರ್ವಾದ ಪಡೆಯುವುದು ನಮ್ಮ ಸೌಭಾಗ್ಯ. ರಾಜಕಾರಣ ಮಾತನಾಡಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಕೇಂದ್ರದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಎಲ್ಲವೂ ತಾರ್ಕಿಕ ಅಂತ್ಯಕ್ಕೆ ಬರುವ ಸಂದರ್ಭದಲ್ಲಿ ಸಮಾಜದ ಸಭೆಗಳನ್ನು ಮಾಡುವುದು ಸರಿಯಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಇದು ಬೂಟಾಟಿಕೆಯ ಮಾತಲ್ಲ; ನಾನು ರಾಜ್ಯಾಧ್ಯಕ್ಷನಾಗಿರುವ ಈ ಸಂದರ್ಭದಲ್ಲಿ ಈ ರೀತಿಯ ಜಾತಿ ಸಮಾವೇಶ ಮಾಡುವುದು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಲಾಭ ತರುವುದಿಲ್ಲ ಎಂದು ಸ್ಪಷ್ಟಪಡಿಸಿದರು.