ನಾರಿಯರ ಶಕ್ತಿ ದೊಡ್ಡದು ಎನ್ನುವುದಕ್ಕೆ ನಿರ್ಮಲಾ ಸೀತಾರಾಮನ್, ದ್ರೌಪದಿ ಮುರ್ಮು ಉದಾಹರಣೆ: ವಿಜಯೇಂದ್ರ

Krishnaveni K

ಶನಿವಾರ, 8 ಮಾರ್ಚ್ 2025 (14:25 IST)
ಬೆಂಗಳೂರು: ದೇಶದ ಸರ್ವತೋಮುಖ ಪ್ರಗತಿಗೆ ಈ ದೇಶದ ತಾಯಂದಿರು, ನಾರಿಯರ ಪಾತ್ರ ಪ್ರಮುಖ ಮತ್ತು ಇದು ಅತ್ಯಗತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಏರ್ಪಡಿಸಿದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಜೀ ಅವರ ಅಪೇಕ್ಷೆಯಂತೆ ಸಾಧಕರಾದ ತಾಯಿ, ಸಹೋದರಿಯರ ಸನ್ಮಾನ ಮಾಡುತ್ತಿದ್ದೇವೆ ಎಂದರು. ದೇಶದೆಲ್ಲೆಡೆ ಇದರ ಆಚರಣೆ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದು ವಿವರಿಸಿದರು.
‘ಮನೆ ಮನೆಯಲ್ಲಿ ದೀಪ ಉರಿಸಿ, ಹೊತ್ತುಹೊತ್ತಿಗೆ ಅನ್ನ ಉಣಿಸಿ.. ಸ್ತ್ರೀ ಅಂದರೆ ಅಷ್ಟೇ ಸಾಕೇ?’ ಎಂಬ ಕವಿತೆಯ ಸಾಲುಗಳನ್ನು ತಿಳಿಸಿದ ಅವರು, ದೇಶದ ಮೊದಲ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಜೀ ಅವರು ಆಯ್ಕೆ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
 
ಮೋದಿಜೀ ಅವರ ಜನಧನ್ ಸೇರಿ ಎಲ್ಲ ಯೋಜನೆಗಳು, ಯಡಿಯೂರಪ್ಪ ಅವರ ಭಾಗ್ಯಲಕ್ಷ್ಮಿ ಯೋಜನೆಗಳನ್ನು ಬಿಜೆಪಿಯು ನೀಡಿದಾಗ ಅವು ಯಾವುದೇ ಜಾತಿಗೆ ಸೀಮಿತ ಆಗಿರಲಿಲ್ಲ ಎಂದು ತಿಳಿಸಿದರು. ಕೇಂದ್ರದ ಶೇ 33 ಮೀಸಲಾತಿಯಿಂದ ತಾಯಂದಿರ ಅವಕಾಶಗಳು ಹೆಚ್ಚಲಿವೆ ಎಂದರು.
 
ಜಮೀರ್ ಅಹ್ಮದ್ ಅವರ ಬಜೆಟ್?
ರಾಜ್ಯದ ಹಣಕಾಸು ಸಚಿವ ಸಿದ್ದರಾಮಯ್ಯನವರು ಬಜೆಟ್ ಮಂಡಿಸಿದ್ದಾರೋ ಅಥವಾ ಜಮೀರ್ ಅಹ್ಮದ್ ಅವರ ಬಜೆಟ್ ಮಂಡನೆ ಮಾಡಿದ್ದಾರೋ ಎಂಬ ಭಾವನೆ ನನಗಷ್ಟೇ ಅಲ್ಲ ರಾಜ್ಯದ ಪ್ರತಿಯೊಬ್ಬ ಹಿಂದೂಗಳಿಗೂ ಅನಿಸಿರುವುದು ಸತ್ಯ ಎಂದು ತಿಳಿಸಿದರು. ಅಲ್ಪಸಂಖ್ಯಾತರಿಗೆ ವಸತಿ ಶಾಲೆ, ವಿದೇಶಕ್ಕೆ ತೆರಳುವ ಮೊತ್ತ 20 ಲಕ್ಷದ ಬದಲಾಗಿ 30 ಲಕ್ಷಕ್ಕೆ ಏರಿಸಿದ್ದಾರೆ. ಹಿಂದೂ ಮಹಿಳೆಯರು ನಿಮ್ಮ ಯೋಜನೆಗಳಿಗೆ ಅರ್ಹರಲ್ಲವೇ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸುವುದಾಗಿ ವಿಜಯೇಂದ್ರ ಅವರು ತಿಳಿಸಿದರು. ಸಿದ್ದರಾಮಯ್ಯರದು ರಾಜ್ಯದ ಅಭಿವೃದ್ಧಿಗೆ ಪೂರಕ ಬಜೆಟ್ ಖಂಡಿತವಾಗಿಯೂ ಅಲ್ಲ ಎಂದು ಟೀಕಿಸಿದರು.
 
ಯಡಿಯೂರಪ್ಪನವರು, ಅನಂತಕುಮಾರ್ ಜೀ ಸೇರಿ ಅನೇಕ ಹಿರಿಯರು ನಗರಸೀಮಿತ ಬಿಜೆಪಿಯನ್ನು ಪ್ರತಿಯೊಂದು ಗ್ರಾಮಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಭೂತಪೂರ್ವ ಬಜೆಟ್ ಕೊಟ್ಟಿದ್ದಾರೆ ಎಂದರೆ, ಇದರ ಹಿಂದಿನ ಶಕ್ತಿ ನಮ್ಮ ತಾಯಿ ಶ್ರೀಮತಿ ಮೈತ್ರಾದೇವಿ ಎಂದು ನೆನಪಿಸಿದರು.

6 ಜನ ಸಾಧಕಿಯರನ್ನು ಸನ್ಮಾನಿಸಲಾಯಿತು. ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ರಾಜ್ಯ ಮಹಿಳಾ ಮೋರ್ಚಾ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ, ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಶಾಂತಲಾ ಭಟ್, ಪೂರ್ಣಿಮಾ ಪ್ರಕಾಶ್, ಡಾ.ವಸುಧಾ ಕುಲಕರ್ಣಿ, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಆಶಾ ರಾವ್, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೇಖಾ ಗೋವಿಂದ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಆನಂದ ಅವರು ಭಾಗವಹಿಸಿದ್ದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ