ಬಿಜೆಪಿ, ಜೆಡಿಎಸ್ ಪಕ್ಷದ ಸಮನ್ವಯ ಸಮಿತಿ ಶೀಘ್ರ ರಚನೆ: ಬಿವೈ ವಿಜಯೇಂದ್ರ

Krishnaveni K

ಮಂಗಳವಾರ, 21 ಅಕ್ಟೋಬರ್ 2025 (15:49 IST)
ಬೆಂಗಳೂರು: ಬಿಜೆಪಿ- ಜೆಡಿಎಸ್ ಪಕ್ಷಗಳ ಎರಡು ಸಮನ್ವಯ ಸಮಿತಿ ರಚಿಸಲು ಯೋಜಿಸಿದ್ದು, ಪಕ್ಷದ ಮುಖಂಡರ ಜೊತೆ ಚರ್ಚಿಸಿ ಸಮಿತಿಯನ್ನು ಪ್ರಕಟಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.
 
ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರನ್ನು ಇಂದು ಭೇಟಿ ಮಾಡಿದ ಅವರು, ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ಮಾಡಿದ್ದಾಗಿ ಹೇಳಿದರು. 8-10 ದಿನಗಳಲ್ಲಿ ಕುಮಾರಸ್ವಾಮಿಯವರು ಹೆಸರುಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ ಎಂದರು. 
 
ಬಿಜೆಪಿ- ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚನೆ ಕುರಿತು ಸಲಹೆಗಳನ್ನು ಕೇಳಿದ್ದೇನೆ. ಗ್ರೇಟರ್ ಬೆಂಗಳೂರು ಚುನಾವಣೆಗಳು ನಡೆಯಲಿದ್ದು, ಬೆಂಗಳೂರಿಗೆ ಸೀಮಿತವಾಗಿ ಒಂದು ಸಮನ್ವಯ ಸಮಿತಿ ಮಾಡೋಣ ಹಾಗೂ ರಾಜ್ಯಕ್ಕೆ ಸಂಬಂಧಿಸಿ ಮತ್ತೊಂದು ಸಮನ್ವಯ ಸಮಿತಿ ಮಾಡುವ ಸಲಹೆಯನ್ನು ಹೆಚ್.ಡಿ ಕುಮಾರಸ್ವಾಮಿ ಅವರು ನೀಡಿದ್ದಾರೆ ಎಂದು ವಿವರಿಸಿದರು.
 
ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಹದಗೆಟ್ಟಿದೆ. ಬೆಂಗಳೂರು, ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ. ಅಭಿವೃದ್ಧಿ ಇಲ್ಲದೇ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಬೆಂಗಳೂರು ಮಹಾನಗರದ ಅವ್ಯವಸ್ಥೆಯನ್ನು ತಾವೇ ನೋಡುತ್ತಿದ್ದೀರಿ ಎಂದು ನುಡಿದರು.
 
ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದ ಯಡಿಯೂರಪ್ಪ
ರಾಜ್ಯ ಸರಕಾರ, ಸಚಿವರು ಅಹಂಕಾರದಿಂದ ಮೆರೆಯುತ್ತಿದ್ದಾರೆ. ಮೋಹನ್‍ದಾಸ್ ಪೈ, ಕಿರಣ್ ಮಜುಂದಾರ್ ಷಾ ಅವರಂಥ ಹಿರಿಯರು ಬೆಂಗಳೂರಿನ ಬಗ್ಗೆ ಮತ್ತು ರಸ್ತೆಗಳ ಕುರಿತು ಸಲಹೆ ನೀಡಿದರೆ, ಆ ಸಲಹೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ; ಅಂಥ ಹಿರಿಯರನ್ನು ಸ್ವತಃ ಸಚಿವರೇ ನಿಂದಿಸುತ್ತಿದ್ದಾರೆ; ಇದು ರಾಜ್ಯ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.
 
ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಇದೇ ರೀತಿ ಟೀಕೆ, ಸಲಹೆಗಳು ಬಂದಿದ್ದವು. ಯಡಿಯೂರಪ್ಪ ಅವರು ಮೋಹನ್‍ದಾಸ್ ಪೈ ಅವರನ್ನು ಮನೆಗೆ ಕರೆಸಿಕೊಂಡು ಟೀ ಕುಡಿಸಿ ಅವರ ಸಲಹೆಗಳನ್ನು ಪಡೆದಿದ್ದರು. ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದರು ಎಂದು ತಿಳಿಸಿದರು.
 
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮರೆತು ಹೋಯಿತೇ?
ಇಲ್ಲಿ ತುಘಲಕ್ ಸರಕಾರ ನಡೆಯುತ್ತಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಗಮನ ಸೆಳೆದರು. ಭ್ರಷ್ಟಾಚಾರದ ಬಗ್ಗೆ ಯಾವ ರೀತಿ ಚರ್ಚೆ ನಡೆಯುತ್ತಿದೆ? ಮೊನ್ನೆ ದಿನ ನಮ್ಮ ಸಂಸದ ರಾಘವೇಂದ್ರ ಅವರು ಇಲ್ಲಿ ಹಣ ಸಂಗ್ರಹಿಸಿ ಬಿಹಾರ ಚುನಾವಣೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಚಿವರಾದಿಯಾಗಿ ಎಲ್ಲರೂ ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ. ಯಾಕೆ ಸ್ವಾಮೀ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮರೆತು ಹೋಯಿತೇ ಎಂದು ಪ್ರಶ್ನಿಸಿದರು.
 
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಹಣವನ್ನು ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿ ಸಾವಿರಾರು ಬೇನಾಮಿ ಖಾತೆ ತೆರೆದು ಹಣ ಪಡೆದು ಚಿನ್ನ ಖರೀದಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲೂ ಬಳಸಲಾಗಿತ್ತು. ಇದನ್ನು ಜಾರಿ ನಿರ್ದೇಶನಾಲಯವು (ಇ.ಡಿ) ನೇರವಾಗಿ ಹೇಳಿದೆ ಎಂದು ಗಮನ ಸೆಳೆದರು.
ಬೃಹತ್ ನೀರಾವರಿ, ನೀರಾವರಿ ಇಲಾಖೆಯಲ್ಲಿ ಶೇ 60, 70ರಷ್ಟು ಕಮಿಷನ್ ಕೇಳುವ ಕುರಿತು ಗುತ್ತಿಗೆದಾರರ ಸಂಘವು ಪತ್ರ ಬರೆದಿದೆ. ಅಧಿಕೃತ ದೂರು ನೀಡಲಿ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಅಧಿಕೃತ ಪತ್ರ ಬರೆದಿರುವಾಗ ಇನ್ಯಾವ ದೂರು ಬೇಕೆಂದು ಕೇಳಿದರು.
 
ರಾಜ್ಯದಲ್ಲಿ ಮರಳು ಮಾಫಿಯ ನಡೆಯತ್ತಿದೆ ಎಂದು ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಪತ್ರ ಬರೆದಿದ್ದಾರೆ. ಕರ್ನಾಟಕ ಸರಕಾರಕ್ಕೆ ಇದರಿಂದ 400- 500 ಕೋಟಿ ನಷ್ಟವಾಗುತ್ತಿದೆ ಎಂದಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು.
 
ಅನೇಕ ಜಿಲ್ಲೆಗಳಲ್ಲಿ ಇಸ್ಪೀಟ್, ಒಸಿ ಮಟ್ಕಾ ದಂಧೆ
ಶಿವಮೊಗ್ಗ ಜಿಲ್ಲೆ ಸೇರಿ ಅನೇಕ ಜಿಲ್ಲೆಗಳಲ್ಲಿ ಇಸ್ಪೀಟ್, ಒಸಿ ಮಟ್ಕಾ ದಂಧೆ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳು, ಆಡಳಿತ ಪಕ್ಷದ ಶಾಸಕರ ಕುಮ್ಮಕ್ಕಿನಿಂದ ಇವು ನಡೆಯುತ್ತಿವೆ. ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರು ಬೇರೆ ರಾಜ್ಯಕ್ಕೆ ತೆರಳಿದಾಗ ಇಲ್ಲಿನ ಗ್ಯಾರಂಟಿ ದೇಶಕ್ಕೇ ಮಾದರಿ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ.
ನಿಮ್ಮ ಸರಕಾರದ ಗ್ಯಾರಂಟಿಗಳು ರೋಲ್ ಮಾಡೆಲ್ ಅಲ್ಲ; ಉಡಾಫೆ ಮಾತುಗಳನ್ನು ಬಿಡಿ; ರಾಜ್ಯವನ್ನು ಕೊಳ್ಳೆ ಹೊಡೆಯುವುದನ್ನು ನಾವು, ಜನತೆ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇವೆಲ್ಲವುಗಳ ವಿರುದ್ಧ ಎರಡೂ ಪಕ್ಷಗಳು ಹೋರಾಟ ಮಾಡುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದರು.

 
ಚಿತ್ತಾಪುರದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಿಯಾಂಕ್ ಖರ್ಗೆಯವರಿಗೆ ಯಾಕೆ ಈ ರೀತಿ ದುರ್ಬುದ್ಧಿ ಬಂತೆಂದು ಗೊತ್ತಿಲ್ಲ. ಅನಾವಶ್ಯಕವಾಗಿ ಆರೆಸ್ಸೆಸ್ ಬಗ್ಗೆ ಟೀಕಿಸುವುದು ಸರಿಯಲ್ಲ. ಇದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವೇ ಅಥವಾ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕುವ ತಂತ್ರವೇ ಗೊತ್ತಿಲ್ಲ; ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದಂತೆ ಪ್ರಿಯಾಂಕ್ ಖರ್ಗೆಯವರು ಇವತ್ತು ಈ ವಿಚಾರದಲ್ಲಿ ಏಕಾಂಗಿಯಾಗಿದ್ದಾರೆ ಎಂದು ನುಡಿದರು.
 
ಆಡಳಿತ ಪಕ್ಷದ ವೈಫಲ್ಯ ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಈ ರೀತಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ನ.2ರಂದು ಚಿತ್ತಾಪುರದಲ್ಲಿ ಯಶಸ್ವಿಯಾಗಿ ಪಥಸಂಚಲನ ಆಗಲಿದೆ. ಆ ವಿಷಯದಲ್ಲಿ ಗೊಂದಲವಿಲ್ಲ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ