ಜೈಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆದ್ದು ನಾವು ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಗ್ಯಾರಂಟಿಯಾಗಿ ಉದ್ಯೋಗ ಕೊಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜಸ್ಥಾನ್ ನಲ್ಲಿ ಭಾರತ್ ಝೋಡೋ ನ್ಯಾಯ್ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ನಾವು ಅಧಿಕಾರಕ್ಕೆ ಬಂದರೆ ಯುವಕರಿಗೆ ಸಿಗಬೇಕಾದ ಐದು ನ್ಯಾಯ ಕೊಡಿಸುತ್ತೇವೆ. ಮೊದಲನೆಯದಾಗಿ ವರ್ಷಕ್ಕೆ 1 ಲಕ್ಷದಂತೆ ಸರ್ಕಾರೀ ಕಚೇರಿಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ನಿರುದ್ಯೋಗಿಗಳನ್ನು ನೇಮಕ ಮಾಡುತ್ತೇವೆ.
ಯುವಕರಿಗೆ ನಾವು ಐದು ವಾಗ್ಧಾನ ನೀಡುತ್ತೇವೆ. ಮೊದಲನೆಯದಾಗಿ ಖಾಲಿ ಇರುವ ಸರ್ಕಾರೀ ಹುದ್ದೆಗೆ ನೇಮಕಾತಿ, ಪರ್ಮೆನೆಂಟ್ ಕೆಲಸ, ನೇಮಕಾತಿ ಪರೀಕ್ಷೆ ಪೇಪರ್ ಲೀಕ್ ಆಗದಂತೆ ನೋಡಿಕೊಳ್ಳುವುದು, ಗುತ್ತಿಗೆ ನೌಕರರಿಗೆ ಸಾಮಾಜಿಕ ಭದ್ರತೆ ಮತ್ತು 40 ವರ್ಷಕ್ಕಿಂತ ಕೆಳಗಿನ ಯುವಕರಿಗೆ ಸ್ಟಾರ್ಟಪ್ ಆರಂಭಿಸಲು ನಿಧಿ ಸ್ಥಾಪಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಲ್ಲದೆ ಕೃಷಿಕರಿಗೆ ಬೆಂಬಲ ಬೆಲೆಗೆ ಕಾನೂನಾತ್ಮಕ ಗ್ಯಾರಂಟಿ ನೀಡುವುದಾಗಿಯೂ ರಾಹುಲ್ ಭರವಸೆ ನೀಡಿದ್ದಾರೆ. ಅಲ್ಲದೆ, ಪರೀಕ್ಷಾ ನೇಮಕಾತಿ ಅಕ್ರಮ ತಡೆಯಲು ಹೊಸ ಕಾನೂನು ರೂಪಿಸಲಾಗುವುದು ಎಂದಿದ್ದಾರೆ. ದೇಶದಲ್ಲಿರುವ ಎಲ್ಲಾ ಡಿಪ್ಲೋಮಾ, ಪದವೀಧರರಿಗೆ ಉದ್ಯೋಗ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.