ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಚರ್ಚೆ ಮಾಡಿ ಈಗಾಗಲೇ ಸಿದ್ದರಾಮಯ್ಯನವರ ರಾಜೀನಾಮೆಯ ಮುಹೂರ್ತ ನಿಗದಿ ಮಾಡಿದ್ದಾರೆ. ಆ ಮುಹೂರ್ತ ಯಾವುದೆಂದು ಸಿದ್ದರಾಮಯ್ಯನವರೇ ಬಾಯಿ ಬಿಡಬೇಕಿದೆ. ಸಿದ್ದರಾಮಯ್ಯನವರ ರಾಜೀನಾಮೆ ನಿಶ್ಚಿತವಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಮತ್ತವರ ಕುಟುಂಬ ಆರೋಪಿ ಸ್ಥಾನದಲ್ಲಿ ನಿಂತಿದೆ. ಭ್ರಷ್ಟಾಚಾರದ ಸಂಬಂಧ ರಾಜ್ಯದ ಜನತೆಗೆ ಅವರು ಉತ್ತರ ಕೊಡಬೇಕಿದೆ ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ನೋಟಿಸ್ ಕೊಟ್ಟು ತನಿಖೆಗೆ ಬರಲು ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ತನಿಖೆ ಎದುರಿಸುತ್ತೀರಾ? ಆರೋಪಿಯಾಗಿ ಹೋಗುವಿರಾ? ಎಂಬುದನ್ನು ಜನತೆಗೆ ತಿಳಿಸಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖ್ಯಮಂತ್ರಿ ಸೇರಿ ಕಾಂಗ್ರೆಸ್ಸಿನ ಎಲ್ಲರೂ ಭ್ರಷ್ಟಾಚಾರದ ಕುರಿತು ಉದ್ದುದ್ದ ಭಾಷಣ ಬಿಗಿಯುತ್ತಾರೆ. ರಾಜ್ಯದ ಹಣಕಾಸಿನ ದುಸ್ಥಿತಿಯಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರವು ಗುತ್ತಿಗೆ ಕಾಮಗಾರಿಗೆ ಬಿಲ್ ಪಾವತಿಸದ ಕಾರಣ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳು ಆರೋಪಿ ಸ್ಥಾನದಲ್ಲಿದ್ದಾರೆ. ಇದರ ನಡುವೆ ಉಪ ಚುನಾವಣೆಗಳೂ ನಡೆಯುತ್ತಿವೆ ಎಂದರು.
ವಕ್ಫ್ ವಿಷಯದಲ್ಲಿ ಸಿಎಂ ಕುಮ್ಮಕ್ಕು..
ಒಂದು ಕಡೆ ವಾಲ್ಮೀಕಿ ನಿಗಮದ ಹಗರಣ, ಇನ್ನೊಂದೆಡೆ ಮೈಸೂರಿನ ಮುಡಾ ಹಗರಣ, ಮತ್ತೊಂದೆಡೆ ಒಬ್ಬ ಬೇಜವಾಬ್ದಾರಿ ಸಚಿವ ಜಮೀರ್ ಅಹಮದ್ ಅವರನ್ನು ಹಿಡಿದುಕೊಂಡು ವಕ್ಫ್ ಬೋರ್ಡಿಗೆ ರೈತರ ಜಮೀನು ಹೊಡೆಯುತ್ತಿದ್ದಾರೆ. ಮಠ ಮಾನ್ಯಗಳ ಜಮೀನು ಕಸಿಯುವ ಪ್ರಯತ್ನ ನಡೆದಿದೆ. ಜಮೀರ್ ಅಹಮದ್ ಷಡ್ಯಂತ್ರದ ಹಿಂದೆ ಮುಖ್ಯಮಂತ್ರಿಗಳ ಕುಮ್ಮಕ್ಕು ಇದೆ ಎಂದು ವಿಜಯೇಂದ್ರ ಅವರು ಆರೋಪಿಸಿದರು.