ನವದೆಹಲಿ: ರಷ್ಯಾದಿಂದ ಇನ್ನು ಮುಂದೆ ತೈಲ ಖರೀದಿಸಲ್ಲ ಎಂದು ಭಾರತದ ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಯಂ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಭಾರತದ ಕಡೆಯಿಂದ ಇನ್ನೂ ಸ್ಪಷ್ಟನೆ ಬಂದಿಲ್ಲ.
ರಷ್ಯಾದಿಂದ ತೈಲ ಖರೀದಿಸುತ್ತಿರುವ ರಾಷ್ಟ್ರಗಳು ಉಕ್ರೇನ್ ಯುದ್ಧಕ್ಕೆ ರಷ್ಯಾಗೆ ಪರೋಕ್ಷವಾಗಿ ಹಣಕಾಸಿನ ಸಹಾಯ ಮಾಡುತ್ತಿವೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಭಾರತದ ವಿರುದ್ಧ ಅವರು ಕೆಂಡಕಾರುತ್ತಲೇ ಇದ್ದರು. ಇದೇ ಕಾರಣಕ್ಕೆ ಭಾರತದ ಮೇಲೆ ಸುಂಕದ ಬರೆ ಹೇರಿದ್ದರು.
ಭಾರತ ಇದಕ್ಕೆ ಬಗ್ಗದೇ ರಷ್ಯಾ, ಚೀನಾ ಜೊತೆ ಸಂಬಂಧ ವೃದ್ಧಿಸಿದ ಬಳಿಕ ಟ್ರಂಪ್ ಮತ್ತಷ್ಟು ಹೊಟ್ಟೆ ಉರಿದುಕೊಂಡಿದ್ದರು. ಇದಾದ ಬಳಿಕ ಪ್ರಧಾನಿ ಮೋದಿ ನನ್ನ ಸ್ನೇಹಿತ ಎಂದು ಹಲವು ಬಾರಿ ಹೇಳಿಕೊಂಡಿದ್ದರು.
ಇದೀಗ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಉಕ್ರೇನ್ ಯುದ್ಧಕ್ಕೆ ಇದರಿಂದ ರಷ್ಯಾಗೆ ಪರೋಕ್ಷವಾಗಿ ಹಣಕಾಸಿನ ಸಹಾಯವಾದಂತಾಗುತ್ತದೆ ಎಂದಿದ್ದಕ್ಕೆ ಮೋದಿ ಕಳವಳ ವ್ಯಕ್ತಪಡಿಸಿದರು. ಈ ಕಾರಣಕ್ಕೆ ರಷ್ಯಾದಿಂದ ತೈಲ ಖರೀದಿಸಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಭಾರತದಿಂದ ಯಾವುದೇ ಹೇಳಿಕೆ ಬಂದಿಲ್ಲ.